ನ್ಯೂಯಾರ್ಕ್ (ಅಮೆರಿಕ): ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮೋದಿ, "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಗುರಿ ಸಾಕಾರಗೊಳಿಸಲು ನಾವು ಕೈಜೋಡಿಸೋಣ" ಎಂದು ಕರೆ ನೀಡಿದರು.
ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದ ಹುಲ್ಲುಹಾಸಿನಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನದಲ್ಲಿ ವಿಶ್ವಸಂಸ್ಥೆಯ ಅಧ್ಯಕ್ಷ ಕ್ಸಾಬಾ ಕೊರೋಸಿ, ಖ್ಯಾತ ನಟ ರಿಚರ್ಡ್ ಗೆರ್, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆ್ಯಡಮ್ಸ್, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸೇರಿದಂತೆ ಹಲವು ಗಣ್ಯರು ಪ್ರಧಾನಿ ಮೋದಿ ಅವರೊಂದಿಗೆ ಯೋಗದಲ್ಲಿ ಪಾಲ್ಗೊಂಡರು. ರಾಜತಾಂತ್ರಿಕರು, ಅಧಿಕಾರಿಗಳು ಸೇರಿ 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು.
ಇದಕ್ಕೂ ಮುನ್ನ ವಿಶ್ವಸಂಸ್ಥೆ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದರು. ನಂತರ ಯೋಗ ದಿನದ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. "ಯೋಗವು ಭಾರತದಿಂದ ಬಂದಿದ್ದು, ಬಹಳ ಹಳೆಯ ಸಂಪ್ರದಾಯವಾಗಿದೆ. ಯೋಗವು ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್ ಹಾಗೂ ರಾಜಧನ ಪಾವತಿಗಳಿಂದ ಮುಕ್ತವಾಗಿದೆ. ಪ್ರತಿಯೊಂದು ವಯಸ್ಸಿನವರು ಮತ್ತು ಲಿಂಗದವರಿಗೂ ಯೋಗ ಹೊಂದಿಕೊಳ್ಳುತ್ತದೆ" ಎಂದು ತಿಳಿಸಿದರು.
"ಯೋಗ ಎಂದರೆ ಒಂದಾಗುವುದು. ಇಂದು ಎಲ್ಲರೂ ಒಟ್ಟಿಗೆ ಸೇರುವುದು ಯೋಗದ ಇನ್ನೊಂದು ರೂಪದ ಅಭಿವ್ಯಕ್ತಿ. ಇಡೀ ಮಾನವೀಯತೆಯ ಸಭೆಯ ಸ್ಥಳದಲ್ಲಿ ನಾವು ಇಲ್ಲಿ ಒಟ್ಟುಗೂಡಿದ್ದೇವೆ. ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ. ಯೋಗ ದಿನಾಚರಣೆಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಂದು ಇಲ್ಲಿ ಬಹುತೇಕ ಎಲ್ಲ ರಾಷ್ಟ್ರೀಯತೆಗಳ ಜನರೂ ಇದ್ದಾರೆ" ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.