ಟೆಲ್ ಅವೀವ್ : ದಕ್ಷಿಣ ಇಸ್ರೇಲ್ನಲ್ಲಿ ಅಕ್ಟೋಬರ್ 7 ರಂದು ಹಮಾಸ್ ಉಗ್ರವಾದಿಗಳು ಇಸ್ರೇಲಿ ಮಹಿಳೆಯರ ಮೇಲೆ ಎಸಗಿದ ಕ್ರೂರ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ವಿಶ್ವ ಸಮುದಾಯ ಏಕೆ ಮೌನವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಶ್ನಿಸಿದ್ದಾರೆ. ಹಮಾಸ್ ಉಗ್ರರು ನಡೆಸಿದ ಲೈಂಗಿಕ ದೌರ್ಜನ್ಯಗಳ ಬಗ್ಗೆ ವಿಶ್ವಸಂಸ್ಥೆ, ಮಾನವ ಹಕ್ಕು ಸಂಘಟನೆಗಳು ಮತ್ತು ಜಾಗತಿಕ ಮಹಿಳಾ ಹಕ್ಕುಗಳ ಸಂಘಟನೆಗಳು ಈವರೆಗೂ ಮೌನವಾಗಿರುವುದೇಕೆ ಎಂದು ಅವರು ಕೇಳಿದ್ದಾರೆ.
ಮಂಗಳವಾರ ತಡರಾತ್ರಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೊಳಗಾದವರು ಯಹೂದಿ ಮಹಿಳೆಯರಾಗಿರುವುದರಿಂದ ನೀವು ಮೌನವಾಗಿದ್ದೀರಾ ಎಂದು ಮಾನವ ಹಕ್ಕುಗಳ ಸಂಘಟನೆಗಳು, ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ವಿಶ್ವಸಂಸ್ಥೆಯನ್ನು ಪ್ರಶ್ನಿಸಿದರು.
ಗಾಜಾದಲ್ಲಿ ಮಹಿಳಾ ಒತ್ತೆಯಾಳುಗಳ ಮೇಲೆ ಭಯಾನಕ ದೌರ್ಜನ್ಯ ನಡೆಯುತ್ತಿರುವುದು ತಿಳಿದು ಬಂದಿದೆ ಎಂದು ಅವರು ಹೇಳಿದರು. ಹಮಾಸ್ ಸೆರೆಯಲ್ಲಿದ್ದ ಒತ್ತೆಯಾಳುಗಳು ತಾವು ಅನುಭವಿಸಿದ ಭಯಾನಕ ಕ್ಷಣಗಳ ಬಗ್ಗೆ ನೆತನ್ಯಾಹು ಅವರಿಗೆ ವಿವರಿಸಿದ ನಂತರ ಈ ಬಗ್ಗೆ ಅವರು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
"ಇಸ್ರೇಲಿ ಮಹಿಳೆಯರ ಮೇಲಿನ ಈ ದೌರ್ಜನ್ಯದ ವಿರುದ್ಧ ಮಾತನಾಡುವಂತೆ ನಾನು ಎಲ್ಲ ನಾಗರಿಕ ನಾಯಕರು, ಸರ್ಕಾರಗಳು ಮತ್ತು ರಾಷ್ಟ್ರಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು. ದಕ್ಷಿಣ ಗಾಜಾದಲ್ಲಿ ಐಡಿಎಫ್ ಪ್ರಗತಿ ಸಾಧಿಸುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ಹಮಾಸ್ ಮತ್ತಷ್ಟು ದಾಳಿಗಳ ರುಚಿ ನೋಡಲಿದೆ ಎಂದು ಹೇಳಿದರು.
ಇಸ್ರೇಲ್ ಪ್ರಧಾನಿ ವಿರುದ್ಧ ನಾಗರಿಕರ ಆಕ್ರೋಶ: ಗಾಜಾದಲ್ಲಿ ಬಂಧಿತರಾಗಿದ್ದ ಇಸ್ರೇಲಿ ಒತ್ತೆಯಾಳುಗಳ ಕುಟುಂಬ ಸದಸ್ಯರು ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಕೆಲ ಇಸ್ರೇಲಿ ನಾಗರಿಕರು ಮಂಗಳವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಯುದ್ಧ ಕ್ಯಾಬಿನೆಟ್ ಸದಸ್ಯರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಇಸ್ರೇಲಿ ನಾಗರಿಕರು ಪ್ರಧಾನಿ ನೆತನ್ಯಾಹು ಮತ್ತು ಯುದ್ಧ ಕ್ಯಾಬಿನೆಟ್ನ ಕಾರ್ಯವೈಖರಿಯ ವಿರುದ್ಧ ಜೋರಾಗಿ ಕೂಗಾಡಿ ಆಕ್ರೊಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೇನಾ ದಾಳಿಯ ಸಮಯದಲ್ಲಿ ಇಸ್ರೇಲಿ ಪಡೆಗಳು ತಮ್ಮ ಮತ್ತು ಮುಸ್ಲಿಂ ಮಹಿಳೆಯರ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದಂತೆ ಹಮಾಸ್ ಭಯೋತ್ಪಾದಕರು ತಮಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಬಿಡುಗಡೆಯಾಗಿ ಬಂದ ಕೆಲ ಮಹಿಳೆಯರು ಯುದ್ಧ ಕ್ಯಾಬಿನೆಟ್ ಸದಸ್ಯರ ಮುಂದೆ ವಿವರಿಸಿದರು.(ಐಎಎನ್ಎಸ್)
ಇದನ್ನೂ ಓದಿ : ಹಮಾಸ್ ಪ್ರಧಾನ ಭದ್ರತಾ ಕಚೇರಿ ಧ್ವಂಸಗೊಳಿಸಿದ ಇಸ್ರೇಲ್