ಕೀವ್ (ಉಕ್ರೇನ್): ಉಕ್ರೇನ್ ವಿರುದ್ಧ ರಷ್ಯಾ 2022ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಆಕ್ರಮಣ ಪ್ರಾರಂಭಿಸಿದಾಗಿನಿಂದ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಉಕ್ರೇನ್ ದೇಶದ ಮೂಲಸೌಕರ್ಯಗಳಿಗೆ 151.2 ಬಿಲಿಯನ್ ಡಾಲರ್ ನೇರ ಹಾನಿಯನ್ನುಂಟು ಮಾಡಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಕೀವ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಅಧ್ಯಯನದ ಪ್ರಕಾರ, ಜೂನ್ 2023 ಕ್ಕೆ ಹೋಲಿಸಿದರೆ ಹಾನಿಯು 700 ಮಿಲಿಯನ್ ಡಾಲರ್ಗಿಂತ ಹೆಚ್ಚಾಗಿದೆ. ಜೂನ್ವರೆಗೆ 150.5 ಬಿಲಿಯನ್ ಡಾಲರ್ ಹಾನಿಯಾಗಿತ್ತು. ಅದು ಇಲ್ಲಿಯವರೆಗೆ 151.2 ಬಿಲಿಯನ್ ಡಾಲರ್ಗೆ ತಲುಪಿದೆ.
ವಸತಿ ಕ್ಷೇತ್ರಕ್ಕೆ ಅತ್ಯಧಿಕ ಅಂದರೆ 55.9 ಬಿಲಿಯನ್ ಡಾಲರ್ ನಷ್ಟು ಹಾನಿಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಒಟ್ಟಾರೆಯಾಗಿ, ಯುದ್ಧದ ಪರಿಣಾಮದಿಂದ 1,67,200 ವಸತಿ ಘಟಕಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ. ಇದರಲ್ಲಿ 1,47,800 ಖಾಸಗಿ ಮನೆಗಳು, 19.1 ಸಾವಿರ ಅಪಾರ್ಟ್ಮೆಂಟ್ ಕಟ್ಟಡಗಳು ಮತ್ತು ಹೆಚ್ಚುವರಿ 0.35 ಸಾವಿರ ವಸತಿ ನಿಲಯಗಳು ಸೇರಿವೆ. ಡೊನೆಟ್ಸ್ಕ್, ಕೀವ್, ಲುಹಾನ್ಸ್ಕ್, ಖಾರ್ಕಿವ್, ಮೈಕೊಲೈವ್, ಚೆರ್ನಿಹಿವ್, ಖೇರ್ಸನ್ ಮತ್ತು ಜಪೊರಿಜಿಯಾ ಪ್ರದೇಶಗಳು ಹೆಚ್ಚು ಬಾಧಿತವಾಗಿವೆ.
ಹಾನಿಯ ವಿಷಯದಲ್ಲಿ ಮೂಲಸೌಕರ್ಯ ಮತ್ತು ಕೈಗಾರಿಕಾ ವಲಯಗಳು ಕ್ರಮವಾಗಿ 36.6 ಬಿಲಿಯನ್ ಮತ್ತು 11.4 ಬಿಲಿಯನ್ ಡಾಲರ್ ನಷ್ಟದೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಯುದ್ಧ ಪ್ರಾರಂಭವಾದಾಗಿನಿಂದ 18 ವಿಮಾನ ನಿಲ್ದಾಣಗಳು, ನಾಗರಿಕ ವಾಯುನೆಲೆಗಳು, 344 ಸೇತುವೆಗಳು ಮತ್ತು ಓವರ್ ಪಾಸ್ ಗಳು ಮತ್ತು 25,000 ಕಿಲೋಮೀಟರ್ ರಾಜ್ಯ ಮತ್ತು ಸ್ಥಳೀಯ ಹೆದ್ದಾರಿಗಳು ಮತ್ತು ಸ್ಥಳೀಯ ರಸ್ತೆಗಳು ಹಾನಿಗೊಳಗಾಗಿವೆ.