ಹೈದರಾಬಾದ್/ನ್ಯೂಯಾರ್ಕ್: ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮೂಗು ತೂರಿಸುವುದನ್ನು ಮುಂದುವರೆಸಿದೆ. ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಹೆಸರುಗಳನ್ನು ಮರುನಾಮಕರಣ ಮಾಡಿರುವ ಚೀನಾಕ್ಕೆ ಅಮೆರಿಕ ತಿರುಗೇಟು ನೀಡಿದೆ. " ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ "ವೆಂದು ಗುರುತಿಸಲಾಗಿದೆ. ಈ ಪ್ರದೇಶಗಳನ್ನು ಮರುನಾಮಕರಣ ಮಾಡುವ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಶ್ವೇತಭವನ ತಿಳಿಸಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು 11 ಸ್ಥಳಗಳ ಅಧಿಕೃತ ಹೆಸರುಗಳನ್ನು ಭಾನುವಾರ ಬಿಡುಗಡೆ ಮಾಡಿದೆ. ಆದರೆ, ಅರುಣಾಚಲ ಪ್ರದೇಶದ ಈ ಪ್ರದೇಶಗಳು ದೀರ್ಘಕಾಲದವರೆಗೆ ಭಾರತದಲ್ಲಿ ಗುರುತಿಸಿಕೊಂಡಿದ್ದು, ಇವು ಇವು ಭಾರತದ ಅವಿಭಾಜ್ಯ ಅಂಗವಾಗಿವೆ. ಈ ಪ್ರದೇಶಗಳನ್ನ ಮರುನಾಮಕರಣ ಮಾಡುವ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಚೀನಾದ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ವಿಚಾರವಾಗಿ ನಾವು ದೀರ್ಘಕಾಲದಿಂದ ಭಾರತದ ಪರವಾಗಿ ನಿಂತಿದ್ದೇವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ :ಚೀನಾ ಗಡಿ ಸಮೀಪ ಭಾರತ-ಯುಎಸ್ ಸೇನೆಯಿಂದ ಸಮರಾಭ್ಯಾಸ : ವಿಡಿಯೋ
"ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾ ದೇಶವು ಮರು ನಾಮಕರಣ ಮಾಡುವುದನ್ನು ಭಾರತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ. ಹೀಗೆ ಹೆಸರುಗಳನ್ನು ಬದಲಾಯಿಸುವುದರಿಂದ ವಾಸ್ತವತೆಯನ್ನ ಬದಲಾಯಿಸಲಾಗುವುದಿಲ್ಲ. ಈ ಹಿಂದೆ ಕೂಡ ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.