ನ್ಯೂಜೆರ್ಸಿ (ಅಮೆರಿಕ): ಕಳೆದ ಕೆಲವು ತಿಂಗಳುಗಳಿಂದ ವಿಮಾನದಲ್ಲಿ ಅವಾಂತರಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ, ಮಹಿಳೆಗೆ ಚೇಳು ಕಚ್ಚಿರುವ ಪ್ರಕರಣ ಸೇರಿದಂತೆ ಅನೇಕ ವಿದ್ಯಮಾನಗಳು ವಿಮಾನೋದ್ಯಮದಲ್ಲಿ ನಡೆದಿವೆ. ಇದೀಗ ಅಮೆರಿಕದಲ್ಲಿ ನಡೆದ ವಿಚಿತ್ರ ಘಟನೆಯೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್ ಪಾಸ್‌ಪೋರ್ಟ್ ಇಲ್ಲದ ನ್ಯೂಜೆರ್ಸಿಯ ಮಹಿಳೆಯನ್ನು ಜಾಕ್ಸನ್‌ವಿಲ್ ಬದಲಿಗೆ ಜಮೈಕಾಗೆ ತಲುಪಿಸಿತ್ತು. ಗ್ಲೌಸೆಸ್ಟರ್ ಕೌಂಟಿಯ ನಿವಾಸಿ ಬೆವರ್ಲಿ ಎಲ್ಲಿಸ್-ಹೆಬ್ಬಾರ್ಡ್ ಎಂಬ ಮಹಿಳೆ ಫಿಲಡೆಲ್ಫಿಯಾದಿಂದ ಜಾಕ್ಸನ್‌ವಿಲ್ಲೆ ಆಗಾಗ ವಿಮಾನ ಪ್ರಯಾಣ ಮಾಡುತ್ತಿರುತ್ತಾರೆ. ಜಾಕ್ಸನ್‌ವಿಲ್ಲೆಯಲ್ಲಿ ಬೆವರ್ಲಿಗೆ ಮತ್ತೊಂದು ಮನೆ ಇದೆ. ಹೀಗಾಗಿ ಆಕೆ ಫಿಲಡೆಲ್ಫಿಯಾದಿಂದ ಜಾಕ್ಸನ್‌ವಿಲ್ಲೆಗೆ ಪ್ರಯಾಣಿಸುತ್ತಿರುತ್ತಾರೆ.
ನವೆಂಬರ್ 6, 2022 ರಂದು ಬೆವರ್ಲಿ ಅವರು ಜಾಕ್ಸನ್‌ವಿಲ್ಲೆಗೆ ಹೋಗಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ಹತ್ತುವ ಮೊದಲು ವಾಶ್ ರೂಂಗೆ ಹೋಗಿದ್ದರು. ಬಳಿಕ ಆಕೆ ಹತ್ತಬೇಕಿದ್ದ ವಿಮಾನದ ಬೋರ್ಡಿಂಗ್ ಗೇಟ್ ಬದಲಾಗಿತ್ತು. ಆದ್ದರಿಂದ ಅವರು ಜಮೈಕಾಗೆ ತೆರಳುವ ವಿಮಾನ ಹತ್ತಿದ್ದಾರೆ. ಸ್ವಲ್ಪ ಸಮಯದ ನಂತರ, ಬೆವರ್ಲಿ ಎಲ್ಲಿಸ್-ಹೆಬಾರ್ಡ್ ತನ್ನ ಗಮ್ಯಸ್ಥಾನಕ್ಕೆ ಹೋಗಬೇಕಾದ ವಿಮಾನದ ಬದಲಿಗೆ ಮತ್ತೊಂದು ವಿಮಾನ ಹತ್ತಿರುವುದರ ಬಗ್ಗೆ ಅರಿತುಕೊಂಡರು. ಕೂಡಲೇ ವಿಚಾರವನ್ನು ಸಿಬ್ಬಂದಿಯ ಗಮನಕ್ಕೂ ತಂದಿದ್ದರು. ಆಕಸ್ಮಿಕವಾಗಿ ಗೇಟ್ ಬದಲಾಯಿಸಿದ್ದರಿಂದ ಈ ಅಚಾತುರ್ಯ ನಡೆದಿತ್ತು ಎಂದು ಸಿಬ್ಬಂದಿ ಹೇಳಿದ್ದರು.