ವಾಷಿಂಗ್ಟನ್ (ಅಮೆರಿಕ): ಪಾಕಿಸ್ತಾನವು ತನ್ನ ದೇಶದಲ್ಲಿನ ಎಲ್ಲಾ ಭಯೋತ್ಪಾದಕ ಗುಂಪುಗಳನ್ನು ಶಾಶ್ವತವಾಗಿ ನಿರ್ನಾಮ ಮಾಡಲು ಕ್ರಮ ತೆಗೆದುಕೊಳ್ಳುವುದು ಬಹಳ ಅಗತ್ಯವಾಗಿದೆ ಎಂಬ ತನ್ನ ನಿಲುವಿನ ಬಗ್ಗೆ ತಾನು ಅಚಲವಾಗಿರುವುದಾಗಿ ಅಮೆರಿಕ ಹೇಳಿದೆ. ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಉಭಯ ರಾಷ್ಟ್ರಗಳು ಒಟ್ಟಾಗಿ ನಿಲ್ಲುವುದಾಗಿ ಭಾರತ ಮತ್ತು ಯುಎಸ್ ಪ್ರತಿಜ್ಞೆ ಮಾಡಿದ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ ಒಂದು ವಾರದೊಳಗೆ ಬಂದಿರುವ ಅಮೆರಿಕದ ಈ ಹೇಳಿಕೆ ಗಮನಾರ್ಹವಾಗಿದೆ.
ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಅಭಿಪ್ರಾಯವನ್ನು ಬಹಿರಂಗಪಡಿಸಿದರು. ಭಾರತ ಮತ್ತು ಯುಎಸ್ನ ಜಂಟಿ ಹೇಳಿಕೆಯನ್ನು "ಆಧಾರರಹಿತ ಮತ್ತು ಏಕಪಕ್ಷೀಯ" ಎಂದು ತಳ್ಳಿಹಾಕಿರುವ ಪಾಕಿಸ್ತಾನದ ನಿಲುವಿನ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ನಾವು ಎಲ್ಲ ಪ್ರದೇಶಗಳಲ್ಲಿ ಭಯೋತ್ಪಾದಕ ಗುಂಪುಗಳಿಂದ ಎದುರಾದ ಅಪಾಯವನ್ನು ಪರಿಹರಿಸಲು ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ವಕ್ತಾರ ಮಿಲ್ಲರ್ ಹೇಳಿದರು.
ಪಾಕಿಸ್ತಾನದ ಜನತೆ ಕಳೆದ ಹಲವಾರು ವರ್ಷಗಳಿಂದ ಭಯೋತ್ಪಾದಕ ದಾಳಿಗಳಿಂದ ಅಪಾರವಾಗಿ ನರಳುತ್ತಿದ್ದಾರೆ. ಪಾಕಿಸ್ತಾನವು ತನ್ನ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಕ್ರಿಯಾ ಯೋಜನೆಗಳನ್ನು ಪೂರ್ಣಗೊಳಿಸುವುದರೊಂದಿಗೆ ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಕೆಲ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಇದಲ್ಲದೆ, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮವನ್ನು ಪಾಲಿಸುತ್ತಿರುವ ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳನ್ನು ನಾವು ಶ್ಲಾಘಿಸುತ್ತೇವೆ ಎಂದು ಅವರು ತಿಳಿಸಿದರು.