ವಾಷಿಂಗ್ಟನ್ (ಅಮೆರಿಕ):2026ರ ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಅಮೆರಿಕ ವಹಿಸಲಿದೆ. ಈ ಕುರಿತು ಅಮೆರಿಕದ ಶ್ವೇತಭವನ ಪ್ರಕಟಣೆ ಬಿಡುಗಡೆ ಮಾಡಿದೆ. 'ದೆಹಲಿಯ ಜಿ20 ಶೃಂಗಸಭೆಯು ವಿಶ್ವದಲ್ಲಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಪ್ರಮುಖ ಹೆಜ್ಜೆ' ಎಂದು ಬಣ್ಣಿಸಿದೆ.
ಶ್ವೇತಭವನದ ಪ್ರಕಟಣೆ:ಹವಾಮಾನ ಬಿಕ್ಕಟ್ಟು, ರಾಷ್ಟ್ರಗಳ ನಡುವಿನ ಸಂಘರ್ಷಗಳು, ಅತಿಕ್ರಮಣ ದಾಳಿಗಳು, ಜಾಗತಿಕ ಆರ್ಥಿಕತೆಯ ಸಮಸ್ಯೆ, ಉಕ್ರೇನ್‌ನಲ್ಲಿ ರಷ್ಯಾ ಯುದ್ಧದಿಂದ ಉಂಟಾದ ಅಪಾರ ಸಾವು-ನೋವು ಸೇರಿದಂತೆ ಇತರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಈ ವರ್ಷದ ನವದೆಹಲಿ ಜಿ20 ಶೃಂಗಸಭೆಯು ಮೊದಲ ಹೆಜ್ಜೆ ಇಟ್ಟಿದೆ ಎಂದು ಶ್ವೇತಭವನ ಕೊಂಡಾಡಿದೆ.
2024ರ ಜಿ20 ಶೃಂಗಸಭೆ ಬ್ರೆಜಿಲ್ನಲ್ಲಿಯೂ 2025ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ನಮ್ಮ ಬದ್ಧತೆಯನ್ನು ಮುಂದುವರೆಸುತ್ತೇವೆ. ಅಮೆರಿಕ ಕೂಡ ಆಫ್ರಿಕನ್ ಯೂನಿಯನ್ ಅನ್ನು ಜಿ20ಯ ಖಾಯಂ ಸದಸ್ಯನಾಗಿ ಆಹ್ವಾನಿಸಲು ಮತ್ತು ಬೆಂಬಲಿಸಲು ಸಂತೋಷಪಡುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜೋ ಬೈಡನ್ ಸೇರಿದಂತೆ ಉಳಿದೆಲ್ಲ ನಾಯಕರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವೇಗಗೊಳಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ಬದ್ಧರಾಗಿದ್ದಾರೆ ಎಂದಿದೆ.
ಮುಖ್ಯವಾಗಿ ಶೃಂಗಸಭೆಯಲ್ಲಿ, ಆರ್ಥಿಕವಾಗಿ ಹಿಂದುಳಿದ, ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳಿಗೆ ನೆರವಾಗಲು ವಿಶ್ವಬ್ಯಾಂಕ್‌ಗೆ ಹೆಚ್ಚಿನ ಹಣಕಾಸು ಸಂಗ್ರಹಿಸುವ ನಿಟ್ಟಿನಲ್ಲಿ ಎಲ್ಲಾ ನಾಯಕರು ಒಗ್ಗೂಡಿದ್ದಾರೆ. ಈ ನಿರ್ಧಾರವು ಜಾಗತಿಕ ಸವಾಲುಗಳನ್ನು ಎದುರಿಸಲು ಬಡ ದೇಶಗಳ ತುರ್ತು ಅಗತ್ಯಗಳನ್ನು ಪರಿಹರಿಸಲು, ಸಾಲದ ಹೊರೆಯಲ್ಲಿರುವ ಶ್ರೀಲಂಕಾದಂತಹ ದೇಶಗಳಿಗೆ ಬೆನ್ನೆಲುಬಾಗಿ ನಿಲ್ಲುವ ವಿಶ್ವಬ್ಯಾಂಕ್‌ಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ ಎಂದು ವೈಟ್ ಹೌಸ್ ಹೇಳಿದೆ.