ಕೀವ್(ಉಕ್ರೇನ್):ರಷ್ಯಾದ ಪಡೆಗಳಿಂದ ಇತ್ತೀಚೆಗೆ ಹಿಂಪಡೆದ ಕೀವ್ ಪ್ರದೇಶದಲ್ಲಿ ಒಟ್ಟು 410 ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯನ್ನರು ಆಕ್ರಮಿಸಿಕೊಂಡಿರುವ ಪಟ್ಟಣಗಳಲ್ಲಿ ನಾಗರಿಕರ ಉದ್ದೇಶಿತ ಹತ್ಯೆಗಳನ್ನು ಖಂಡಿಸಿದ್ದಾರೆ. ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಬುಚಾ ಮತ್ತು ಕೀವ್‌ನ ಇತರ ಉಪನಗರಗಳಲ್ಲಿ ನಾಗರಿಕರ ಹತ್ಯೆಯ ಆರೋಪವನ್ನು ತಿರಸ್ಕರಿಸಿದೆ.
ಈ ವಾರಾಂತ್ಯದಲ್ಲಿ ರಷ್ಯಾ ಸೇನೆಯಿಂದ ಇಡೀ ಕೀವ್ ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆದ ಉಕ್ರೇನ್, ರಾಜಧಾನಿಯ ವಾಯುವ್ಯಕ್ಕೆ 30 ಕಿ.ಮೀ (19 ಮೈಲುಗಳು) ದೂರದಲ್ಲಿರುವ ಬುಚಾ ಪಟ್ಟಣದಲ್ಲಿ 'ಉದ್ದೇಶಪೂರ್ವಕ ಹತ್ಯಾಕಾಂಡ' ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಇಲ್ಲಿ 280 ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎಂದು ಬುಚಾ ಮೇಯರ್ ಅನಾಟೊಲಿ ಫೆಡೋರುಕ್ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ನಾಯಕರ ಖಂಡನೆ:ಉಕ್ರೇನಿಯನ್ ಪಡೆಗಳು ಪ್ರದೇಶವನ್ನು ಮರಳಿ ಪಡೆಯುತ್ತಿದ್ದಂತೆ ನಾಗರಿಕರ ಮೃತದೇಹಗಳು ಬೀದಿಯಲ್ಲಿ ಕಂಡುಬಂದವು. ಶನಿವಾರ, AFP ಪತ್ರಕರ್ತರು ಬುಚಾದ ಒಂದೇ ರಸ್ತೆಯಲ್ಲಿ ಕನಿಷ್ಠ 20 ಶವಗಳನ್ನು ನೋಡಿದ್ದಾರೆ. ಹಲವರ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ಗುಂಡು ಹೊಡೆದು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಗಳು ವರದಿಯಾದ ನಂತರ ಕೀವ್ ಪ್ರದೇಶದಲ್ಲಿನ ದಾಳಿಯನ್ನು ಅಂತರರಾಷ್ಟ್ರೀಯ ನಾಯಕರು ಖಂಡಿಸಿದ್ದಾರೆ.