ಟೆಲ್ ಅವಿವ್(ಇಸ್ರೇಲ್):ಗಾಜಾದಲ್ಲಿ ಯುದ್ಧಾಪರಾಧ ಎಸಗುತ್ತಿರುವ ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸುತ್ತಿರುವ ಇಸ್ರೇಲ್ 'ಭಯೋತ್ಪಾದಕ ರಾಷ್ಟ್ರ'ವಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಅಲ್ಲಿನ ನಗರ ಮತ್ತು ಜನರ ಸಂಪೂರ್ಣ ವಿನಾಶದ ಕಾರ್ಯತಂತ್ರವನ್ನು ಇಸ್ರೇಲ್ ಜಾರಿಗೆ ತರುತ್ತಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಆರೋಪಿಸಿದ್ದಾರೆ.
ಇತ್ತೀಚೆಗೆ ಮಾಡಿದ ಭಾಷಣದಲ್ಲಿ, "ಗಾಜಾದಲ್ಲಿ ತುಳಿತಕ್ಕೊಳಗಾದ ಜನರನ್ನು ಕ್ರೂರವಾಗಿ ಕೊಂದ ಇಸ್ರೇಲ್‌ನ ರಾಜಕೀಯ ಮತ್ತು ಮಿಲಿಟರಿ ನಾಯಕರು ಅಂತರರಾಷ್ಟ್ರೀಯ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುತ್ತಾರೆ. ಈ ಕುರಿತು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಅವರು ಹೇಳಿದ್ದರು.
ಎರ್ಡೊಗನ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ ಆ್ಯಪ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಎರ್ಡೊಗನ್ ಅವರು, "ಹಮಾಸ್ ಭಯೋತ್ಪಾದಕ ರಾಜ್ಯ"ವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಯೋತ್ಪಾದಕರನ್ನು ಬೆಂಬಲಿಸುವ ಶಕ್ತಿಗಳಿವೆ. ಅವರಲ್ಲಿ ಟರ್ಕಿಯ ಅಧ್ಯಕ್ಷ ಎರ್ಡೊಗನ್ ಕೂಡ ಒಬ್ಬರು. ಅವರು ಇಸ್ರೇಲ್ ಅನ್ನು ಭಯೋತ್ಪಾದಕ ರಾಷ್ಟ್ರವೆಂದು ಕರೆಯುತ್ತಾರೆ. ಆದರೆ ಹಮಾಸ್ ಭಯೋತ್ಪಾದಕ ರಾಜ್ಯವನ್ನು ಬೆಂಬಲಿಸುತ್ತಾರೆ. ಅವರೇ ಟರ್ಕಿಯೊಳಗಿನ ಟರ್ಕಿಯ ಹಳ್ಳಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಆದ್ದರಿಂದ, ನಾವು ಅವರಿಂದ ಪಾಠ ಕಲಿಯಲು ಹೋಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ: ಏಳು ಸೈನಿಕರು ಸೇರಿದಂತೆ 17 ಜನರಿಗೆ ಗಾಯ