ಇಸ್ತಾಂಬುಲ್(ಟರ್ಕಿ):ಪ್ರಬಲ ಭೂಕಂಪನಕ್ಕೆ ತುತ್ತಾಗಿರುವ ಟರ್ಕಿ, ಸಿರಿಯಾ ಮರಣದ ಮನೆಯಾದಂತಾಗಿದೆ. ದಿನವೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, 24 ಸಾವಿರ ತಲುಪಿದೆ. ಅವಶೇಷಗಳಡಿ ಸಿಲುಕಿದ ಹಲವು ಮಕ್ಕಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಲ್ಲದೇ, ಬದುಕುಳಿದ ಜನರು ಮೂಲಸೌಕರ್ಯ, ಊಟವಿಲ್ಲದೇ ಪರದಾಡುತ್ತಿದ್ದಾರೆ.
ದಶಕಗಳಲ್ಲೇ ಕಂಡುಕೇಳರಿಯದ ಭೂಕಂಪನದಿಂದ ದಕ್ಷಿಣ ಟರ್ಕಿ ಮತ್ತು ವಾಯುವ್ಯ ಸಿರಿಯಾ ಭಾರೀ ಹಾನಿಗೀಡಾಗಿವೆ. ಗಾಜಿಯಾಂಟೆಪ್ನಲ್ಲಿ 7.8 ತೀವ್ರತೆಯ ಭೂಕಂಪನದ ಬಳಿಕ ಹಲವಾರು ನಗರಗಳು ಧ್ವಂಸವಾಗಿವೆ. ಯುದ್ಧಪೀಡಿತ ಸಿರಿಯಾದಲ್ಲೂ ಕಂಪನ ತೀವ್ರ ಹಾನಿಯುಂಟು ಮಾಡಿದೆ. ಟರ್ಕಿಯೊಂದರಲ್ಲೇ 20 ಸಾವಿರ ಜನರು ಅಸುನೀಗಿ, 80 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ 4 ಸಾವಿರ ಸಾವಾಗಿವೆ.
ಉಭಯ ದೇಶಗಳಲ್ಲಿ ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದವರ ಲೆಕ್ಕ ಸಿಕ್ಕಿಲ್ಲ. ಆಗಾಗ ಭೂಮಿ ನಡುಗುತ್ತಿರುವ ಕಾರಣ ಜನರು ಮನೆಗಳಲ್ಲಿ ವಾಸ ಮಾಡಲು ಹೆದರಿದ್ದಾರೆ. ಹೀಗಾಗಿ ಜನರು ರಸ್ತೆಗೆ ಬಂದಿದ್ದು, ಆಹಾರದ ಕೊರತೆ ಉಂಟಾಗಿದೆ. ಟರ್ಕಿಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮನೆಗಳು ಧರಾಶಾಹಿಯಾಗಿವೆ ಎಂದು ಅಂದಾಜಿಸಲಾಗಿದೆ.
ವಿಧಿಯನ್ನೇ ಗೆದ್ದು ಬಂದರು:5 ದಿನಗಳ ಹಿಂದೆ ಸಂಭವಿಸಿದ ದುರಂತದಲ್ಲಿ 101 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ 6 ಜನರನ್ನು ರಕ್ಷಣಾ ಪಡೆಗಳು ಜೀವಂತವಾಗಿ ಹೊರತೆಗೆದಿವೆ. ಆಹಾರ, ನೀರು ಇಲ್ಲದೇ ಜನರು ಜೀವ ಹಿಡಿದುಕೊಂಡಿದ್ದರು. ಅವಶೇಷಗಳಡಿ ಇನ್ನೂ ಸಾಕಷ್ಟು ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ದೊಡ್ಡ ದೊಡ್ಡ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯಲು ಅಸಾಧ್ಯವಾದ ಕಾರಣ ಮತ್ತು 5 ದಿನಗಳು ಕಳೆದಿದ್ದು ಬದುಕುಳಿದಿರುವ ಸಾಧ್ಯತೆ ಕಡಿಮೆಯಾಗಿದೆ.
ಭೀಕರ ದುರಂತದಲ್ಲಿ 24 ಸಾವಿರ ಜನರು ಸಾವನ್ನಪ್ಪಿದ ಕಾರಣ ಸ್ಮಶಾನಗಳು ತುಂಬಿ ಹೋಗಿವೆ. ಹೀಗಾಗಿ ಹಲವೆಡೆ ಮೃತದೇಹಗಳನ್ನು ಹೊದಿಕೆಯಲ್ಲಿ ಸುತ್ತಿಟ್ಟಿದ್ದ ದೃಶ್ಯಗಳು ಕಂಡುಬರುತ್ತಿವೆ. ಈ ಮಧ್ಯೆ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ರಕ್ಷಣಾ ಕಾರ್ಯಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನಾಹುತದ ಬಳಿಕ ಕ್ಷಿಪ್ರಗತಿಯಲ್ಲಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.