ರೋಲಿಂಗ್ ಫೋರ್ಕ್ (ಯುಎಸ್‌ಎ):ಅಮೆರಿಕದ ಪಶ್ಚಿಮ ಮಿಸಿಸಿಪ್ಪಿಯಲ್ಲಿ ಉಂಟಾದ ಭೀಕರ ಸುಂಟರಗಾಳಿ ಸಾಕಷ್ಟು ಪ್ರಾಣ, ಆಸ್ತಿಪಾಸ್ತಿ ನಾಶಗೊಳಿಸಿದೆ. ಸುಳಿಗಾಳಿ ಮತ್ತು ಚಂಡಮಾರುತಗಳಿಂದ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮನೆಗಳು ಗಾಳಿಗೆ ನೆಲಸಮವಾಗಿದ್ದು, ಭೀಕರತೆಗೆ ಸಾಕ್ಷಿಯಾಗಿವೆ. ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಸುಂಟರಗಾಳಿ ಬೀಸಿದೆ. ಮಿಸಿಸಿಪ್ಪಿ ಮತ್ತು ಅಲಬಾಮದಲ್ಲಿ ಕಷ್ಟ-ನಷ್ಟಗಾಳಿರುವುದನ್ನು ವಿಡಿಯೋ, ಫೋಟೋಗಳಲ್ಲಿ ನೋಡಬಹುದು. ಮಿಸಿಸಿಪ್ಪಿಯಲ್ಲೇ 25 ಜನರು ಸಾವನ್ನಪ್ಪಿದ್ದರೆ, ಅಲಬಾಮಾದಲ್ಲಿ ಒಬ್ಬರು ಅಸುನೀಗಿದ್ದಾರೆ. ಇಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಗಾಳಿಯ ಹೊಡೆತಕ್ಕೆ ಕಟ್ಟಡಗಳು, ಮನೆಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಿಸಿಸಿಪ್ಪಿ ಪ್ರಾಂತ್ಯದ ಸಿಲ್ವಿರ್ ಸಿಟಿ, ರೋಲಿಂಗ್ ಪೋರ್ಕ್ ಹಾಗೂ ಜಾಕ್ಸನ್ ನಗರದ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ. ಮನೆಗಳು ಉರುಳಿಬಿದ್ದು ಅನಾಹುತ ಘಟಿಸಿದೆ. ಗಂಟೆಗೆ 170 ಮೈಲುಗಳಿಗೂ (274 ಕಿ.ಮೀ) ಹೆಚ್ಚು ವೇಗದಲ್ಲಿ ಗಾಳಿ ಬೀಸಿದ್ದು, ಭಾರಿ ಹಾನಿಗೆ ಕಾರಣವಾಗಿದೆ ಎಂದು ರಾಜ್ಯ ತುರ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದೆ.
ರಕ್ಷಣಾ ಕಾರ್ಯಾ ಮುಂದುವರಿಕೆ:ತೊಂದರೆಗೀಡಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. ಬದುಕುಳಿದವರ ಮತ್ತು ಅವಶೇಷಗಳಡಿ ಸಿಲುಕಿದವರ ಪ್ರಾಣ ರಕ್ಷಣೆ ನಡೆಸಲಾಗುತ್ತಿದೆ. ಗಾಯಗೊಂಡ ಜನರಿಗಾಗಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರಖರ ಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ನೀರಿನ ಕೊಳ, ದೊಡ್ಡ ಕಟ್ಟಡಗಳನ್ನು ಆಶ್ರಯಿಸಿದ್ದರು.
ಶನಿವಾರ ರಾತ್ರಿ ಸಂಭವಿಸಿದ ಘಟನೆಯಿಂದಾಗಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಸಾಲುಸಾಲಾಗಿ ಉರುಳಿ ಬಿದ್ದ ಮರಗಳು, ಸಣ್ಣ ಕಟ್ಟಡಗಳು, ವಿದ್ಯುತ್ ಕಂಬಗಳು ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಂತಿವೆ. ಸುಂಟರಗಾಳಿ ಅನಾಹುತದ ಬಳಿಕ ಮಿಸ್ಸಿಸ್ಸಿಪ್ಪಿ ಗವರ್ನರ್ ಟೇಟ್ ರೀವ್ಸ್ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಹತ್ತಿ, ಜೋಳ ಮತ್ತು ಸೋಯಾಬೀನ್ ಮತ್ತು ಮೀನು ಸಾಕಣೆ ಕೊಳಗಳಲ್ಲಿ ಉಂಟಾದ ಹಾನಿಯನ್ನು ವೀಕ್ಷಿಸಿ ತಕ್ಷಣದ ಪರಿಹಾರ ಮತ್ತು ಮರುನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪರೂಪದಲ್ಲಿ ಅಪರೂಪದ ವಿದ್ಯಮಾನ:ಚಂಡಮಾರುತದ ವರದಿ ಮತ್ತು ರಾಡಾರ್ ದತ್ತಾಂಶದ ಅಂದಾಜಿನ ಆಧಾರದ ಮೇಲೆ ಸುಂಟರಗಾಳಿಯು 1 ಗಂಟೆಗೂ ಹೆಚ್ಚು ಕಾಲ ಬೀಸಿತು. 170 ಮೈಲಿಗಳಿಗಿಂತ (274 ಕಿಲೋಮೀಟರ್) ವೇಗದಲ್ಲಿ ಗಾಳಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಬಹಳ ಅಪರೂಪದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನವಾಗಿದೆ. ತೀವ್ರ ಸುಳಿಗಾಳಿಯಿಂದ ಜನರು ತತ್ತರಿಸಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸುಂಟರಗಾಳಿಯಿಂದ ವ್ಯಾಪಕವಾಗಿ ಜನಜೀವನಕ್ಕೆ ನಷ್ಟವಾಗಿರುವುದು ವರದಿಯಾಗಿದೆ. ಅಲಬಾಮ, ಮಿಸಿಸಿಪ್ಪಿ ಮತ್ತು ಟೆನ್ನೀಸಿ ನಗರಗಳಲ್ಲಿ ಇದು ತೀವ್ರವಾಗಿದೆ. ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಹಲವು ಮನೆಗಳ ಛಾವಣಿಗಳು ಹಾರಿಹೋಗಿವೆ. ಶನಿವಾರ ಬೆಳಗ್ಗೆಯಿಂದ 24 ಗಂಟೆ ಅವಧಿಯಲ್ಲಿ ಮಿಸಿಸಿಪ್ಪಿ ಮತ್ತು ಅಲಬಾಮಾ ನಗರಗಳಲ್ಲಿ ಕನಿಷ್ಠ 11 ಬಾರಿ ಸುಂಟರಗಾಳಿ ಬೀಸಿದೆ.
ವೈದ್ಯಕೀಯ ಸೇವೆ ಚುರುಕು:ಗಾಳಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳು, ಉರುಳಿಬಿದ್ದ ಕಟ್ಟಡಗಳ ಚಿತ್ರ, ವಿಡಿಯೋಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಭಿತ್ತರಿಸಿವೆ. ಇಲ್ಲಿನ ಜನರ ಜೀವ ರಕ್ಷಣೆಗೆ ನಿಮ್ಮ ಪ್ರಾರ್ಥನೆ ಅಗತ್ಯವಾಗಿದೆ ಎಂದು ಮಿಸಿಸಿಪ್ಪಿ ಗವರ್ನರ್ ಟ್ವೀಟ್ ಮಾಡಿದ್ದಾರೆ. ವೈದ್ಯಕೀಯ ಸೇವೆಯನ್ನು ಚುರುಕುಗೊಳಿಸಲಾಗಿದೆ. ಆಂಬ್ಯುಲೆನ್ಸ್ಗಳು ಮತ್ತು ತುರ್ತು ನೆರವು ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ : 34 ವಲಸಿಗರು ನಾಪತ್ತೆ