ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯ ಮಧ್ಯೆ, ಕಂದಹಾರ್ ಗವರ್ನರ್ ಮುಲ್ಲಾ ಶೆರಿನ್ ಅಖುಂದ್ ನೇತೃತ್ವದ ತಾಲಿಬಾನ್ ನಿಯೋಗವೊಂದು ಬುಧವಾರ ಇಸ್ಲಾಮಾಬಾದ್ ಗೆ ಭೇಟಿ ನೀಡಲಿದೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನದ ಸರ್ಕಾರ ಮತ್ತು ಮಿಲಿಟರಿ ನಾಯಕತ್ವದೊಂದಿಗೆ ನಿರ್ಣಾಯಕ ಮಾತುಕತೆ ನಡೆಯಲಿದೆ ಎಂದು ವರದಿಗಳು ಹೇಳಿವೆ. ಇದು ಎರಡು ನೆರೆಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಹೊಸ ಪ್ರಯತ್ನವಾಗಿದೆ ಎಂದು ರಾಜತಾಂತ್ರಿಕ ಮೂಲಗಳು ಬಣ್ಣಿಸಿವೆ.
ಪಾಕಿಸ್ತಾನದಲ್ಲಿ ನಿಷೇಧಿತ ತೆಹ್ರೀಕ್-ಇ- ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕ ಗುಂಪಿನ ಸದಸ್ಯರಿಗೆ ಅಫ್ಘಾನಿಸ್ತಾನದ ಬೆಂಬಲ, ಸೌಲಭ್ಯ ಮತ್ತು ಆಶ್ರಯ ನೀಡಿದ ಆರೋಪಗಳ ಬಗ್ಗೆ ಪಾಕಿಸ್ತಾನ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ. ಕಾಬೂಲ್ನ ತಾಲಿಬಾನ್ ಆಡಳಿತವು ಟಿಟಿಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಒತ್ತಾಯಿಸಿದೆ.
ಮೂಲಗಳ ಪ್ರಕಾರ, ತಾಲಿಬಾನ್ ನಿಯೋಗವು ರಕ್ಷಣಾ ಮತ್ತು ಮಾಹಿತಿ ಸಚಿವರೊಂದಿಗೆ ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆಯಾದ ಜನರಲ್ ಡೈರೆಕ್ಟರೇಟ್ ಆಫ್ ಇನ್ಫರ್ಮೇಷನ್ (ಜಿಡಿಐ) ಸದಸ್ಯರನ್ನು ಸಹ ಒಳಗೊಂಡಿರಲಿದೆ. ಟಿಟಿಪಿ ಮತ್ತು ಅದರ ಅಂಗಸಂಸ್ಥೆಗಳನ್ನು ನಿಗ್ರಹಿಸುವಲ್ಲಿ ಆಡಳಿತದ ನಿಷ್ಕ್ರಿಯತೆ ಮತ್ತು ವೈಫಲ್ಯದಿಂದಾಗಿ ಪಾಕಿಸ್ತಾನವು ತಾಲಿಬಾನ್ ಜೊತೆಗಿನ ಉನ್ನತ ಮಟ್ಟದ ಮಾತುಕತೆಯನ್ನು ನಿಲ್ಲಿಸಿದ ಎರಡು ತಿಂಗಳಲ್ಲಿ ಇದು ಮೊದಲ ಉನ್ನತ ಮಟ್ಟದ ಮಾತುಕತೆಯಾಗಿದೆ.