ಅಡಿಸ್ ಅಬಾಬಾ : ಸುಮಾರು 70 ಸಾವಿರ ನಿರಾಶ್ರಿತರು ಹಿಂಸಾಚಾರ ಪೀಡಿತ ಸುಡಾನ್ ತೊರೆದು ಪಕ್ಕದ ಇಥಿಯೋಪಿಯಾ ಪ್ರವೇಶಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಸ್ಥೆ (International Organization for Migration -IOM) ತಿಳಿಸಿದೆ. ಸುಡಾನ್‌ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಿಂದ ಲಕ್ಷಾಂತರ ಜನ ನೆರೆಯ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಯುಎನ್ ವಲಸೆ ಏಜೆನ್ಸಿಯ ಅಂಕಿ - ಅಂಶಗಳ ಪ್ರಕಾರ ಜುಲೈ 23 ರ ಹೊತ್ತಿಗೆ ಪೂರ್ವ ಆಫ್ರಿಕಾ ದೇಶಗಳ ಅಮ್ಹಾರಾ, ಬೆನಿಶಾಂಗುಲ್ ಗುಮ್ಜ್ ಮತ್ತು ಗಂಬೆಲ್ಲಾ ಪ್ರದೇಶಗಳಲ್ಲಿನ ಹಲವಾರು ಕಡೆಗಳಲ್ಲಿ ಗಡಿ ದಾಟುವ ಸ್ಥಳಗಳ ಮೂಲಕ 69,000 ಕ್ಕೂ ಹೆಚ್ಚು ಜನರು ಇಥಿಯೋಪಿಯಾಕ್ಕೆ ಆಗಮಿಸಿದ್ದಾರೆ.
ನಿರಾಶ್ರಿತರು ಪ್ರಯಾಣಿಸಲು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಯಾಣಿಸಲು ವಾಹನಗಳಿಲ್ಲದೇ ಜನ ಪ್ರಯಾಸ ಪಡುತ್ತಿರುವ ಮಧ್ಯೆ ಮಳೆಯಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಸುಡಾನ್ ನಿರಾಶ್ರಿತರು ನಿರಂತರವಾಗಿ ಇಥಿಯೋಪಿಯಾಗೆ ಆಗಮಿಸುತ್ತಿದ್ದು, ಅವರಿಗೆ ಆಹಾರ, ಆಹಾರೇತರ ವಸ್ತುಗಳು, ನೀರು ಮತ್ತು ನೈರ್ಮಲ್ಯ ಮತ್ತು ಆರೋಗ್ಯ ಸೇವೆಗಳು ಸೇರಿದಂತೆ ಜೀವ ರಕ್ಷಕ ಸೇವೆಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ ಎಂದು ಐಓಎಂ ಹೇಳಿದೆ.
ಈ ವಾರದ ಆರಂಭದಲ್ಲಿ ಸುಡಾನ್ನಿಂದ ಇಥಿಯೋಪಿಯಾಗೆ ಹಿಂದಿರುಗಿರುವವರ ಪೈಕಿ ಇಥಿಯೋಪಿಯನ್ನರ ಪ್ರಮಾಣ ಶೇ 49 ರಷ್ಟಿದ್ದರೆ, ಸುಡಾನಿ ಪ್ರಜೆಗಳ ಪ್ರಮಾಣ ಶೇ 30 ರಷ್ಟಿದ್ದಾರೆ. ಏಪ್ರಿಲ್ 15 ರಂದು ಸುಡಾನ್ ರಾಜಧಾನಿ ಖಾರ್ಟೂಮ್ನಲ್ಲಿ ಭೀಕರ ಸಶಸ್ತ್ರ ಸಂಘರ್ಷ ಆರಂಭವಾಗಿದೆ. ಹಿಂಸಾತ್ಮಕ ಹೋರಾಟವು ಶೀಘ್ರದಲ್ಲಿಯೇ ದೇಶಾದ್ಯಂತ ವ್ಯಾಪಿಸಿತು. ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಕ್ಷಿಪ್ರ ಬೆಂಬಲ ಪಡೆಗಳ (RSF) ಅರೆಸೈನಿಕ ಗುಂಪಿನ ಮಧ್ಯೆ ಸಶಸ್ತ್ರ ಹೋರಾಟ ನಡೆಯುತ್ತಿದೆ.