ಅಬುಜಾ (ನೈಜೀರಿಯಾ):ವಾಯುವ್ಯ ನೈಜೀರಿಯಾದ ಕಡುನಾ ರಾಜ್ಯದಲ್ಲಿ ಶುಕ್ರವಾರ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಝರಿಯಾ ಸೆಂಟ್ರಲ್ ಮಸೀದಿಯ ಒಂದು ಭಾಗ ಕುಸಿದು ಬಿದ್ದು ಏಳು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ನೂರಾರು ಜನರು ಮಸೀದಿಯ ಒಳಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝರಿಯಾ ಸೆಂಟ್ರಲ್ ಮಸೀದಿ ಝರಿಯಾ ನಗರದಲ್ಲಿದೆ. ಇದು ಉತ್ತರ ನೈಜೀರಿಯಾದ ದೊಡ್ಡ ನಗರಗಳಲ್ಲಿ ಒಂದಾಗಿದೆ.
ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. "ಸ್ಥಳದಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಂಡು ಬಂದವು. ಘಟನೆಯಲ್ಲಿ ಸುಮಾರು 23 ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ ಎಂದು ರಾಜ್ಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. 1830ರ ದಶಕದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮಸೀದಿಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬೀಳುತ್ತಿರುವುದಲ್ಲಿ ಕಾಣಬಹುದಾಗಿದೆ.
'ಹೃದಯ ವಿದ್ರಾವಕ ಘಟನೆ':ಕಡುನಾ ಗವರ್ನರ್ ಉಬಾ ಸಾನಿ ಅವರು ದುರಂತದ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಿದರು. ಮತ್ತು ಇದನ್ನು ಹೃದಯ ವಿದ್ರಾವಕ ಘಟನೆ ಎಂದು ಕರೆದಿದ್ದಾರೆ. ಘಟನೆಯ ಸಂತ್ರಸ್ತರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ತುರ್ತು ರಕ್ಷಣಾ ಸಿಬ್ಬಂದಿ ಈಗಾಗಲೇ ಝರಿಯಾದಲ್ಲಿದೆ ಎಂದು ಅವರ ಕಚೇರಿಯ ಮೂಲಗಳು ತಿಳಿಸಿವೆ. ಕಳೆದ ವರ್ಷ ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದ ಘಟನೆಗಳು ವರದಿಯಾಗಿದ್ದವು. ಬಳಿಕ ಈಗ ಮಸೀದಿ ಕುಸಿತ ಸಂಭವಿಸಿದೆ. ಕಟ್ಟಡ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ವಿಫಲರಾಗಿರುವುದು ಮತ್ತು ಕಳಪೆ ನಿರ್ವಹಣೆಯ ಇಂತಹ ಅನಾಹುತಗಳಿಗೆ ಕಾರಣ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.