ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಅವರು ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎನ್ನಲಾಗಿದೆ. ಆದರೆ ಈ ವರದಿಯನ್ನು ಕ್ರೆಮ್ಲಿನ್ ತಳ್ಳಿ ಹಾಕಿದೆ.
ವೈದ್ಯರ ತಂಡ ಅವರ ಚಿಕಿತ್ಸೆಯಲ್ಲಿ ತೊಡಗಿದೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಪುಟಿನ್ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅಷ್ಟರಲ್ಲಿ ಈ ಸುದ್ದಿ ಬಂದಿದೆ. ಕಾವಲುಗಾರ ಪುಟಿನ್ ಅವರು ನೆಲದ ಮೇಲೆ ಮಲಗಿರುವುದನ್ನು ಕಂಡಿದ್ದಾರೆ. ಹೀಗೆ ಪುಟಿನ್ ನೆಲದ ಮೇಲೆ ಇರುವುದನ್ನು ನೋಡಿದ ತಕ್ಷಣ ತಕ್ಷಣವೇ ವೈದ್ಯರಿಗೆ ಕರೆ ಮಾಡಿದ್ದಾರೆ.
ಮಾಸ್ಕೋ ಸಮಯ 21:05 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಅವರ ಕೊಠಡಿಯಿಂದ ದೊಡ್ಡ ಶಬ್ದ ಬಂದಿದೆ. ಸದ್ದು ಕೇಳಿದ ಸೆಕ್ಯುರಿಟಿ ಗಾರ್ಡ್‌ಗಳು ಪುಟಿನ್ ಇರುವ ಕೋಣೆಯನ್ನು ತಲುಪಿದಾಗ ಅವರು ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ಅದೇ ಸಮಯದಲ್ಲಿ ಊಟದ ತಟ್ಟೆಯೂ ಅವರ ಪಕ್ಕದಲ್ಲಿತ್ತು ಎನ್ನಲಾಗಿದೆ. ಈ ವಿಚಾರ ಸಿಕ್ಕ ತಕ್ಷಣವೇ ವೈದ್ಯರು ಅವರ ಕೊಠಡಿಗೆ ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ವೈದ್ಯರ ತಂಡ ಪುಟಿನ್ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಪುಟಿನ್ ಅವರಿಗೆ ಪ್ರಜ್ಞೆ ಬಂದಿದ್ದು, ಅವರ ಆರೋಗ್ಯ ಚೆನ್ನಾಗಿದೆ. ಟೆಲಿಗ್ರಾಮ್ ಗ್ರೂಪ್ ಜನರಲ್ ಎಸ್‌ವಿಆರ್ ಈ ಸುದ್ದಿಯನ್ನು ಮೊದಲಿಗೆ ಹಂಚಿಕೊಂಡಿದೆ ಎಂದು ವರದಿಯಾಗಿದೆ.
ಇದೇ ವೇಳೆ ಪುಟಿನ್ ಅವರ ಆಹಾರವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಹಾರದಲ್ಲಿ ವಿಷ ಬೆರೆಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಆದರೆ ಈ ಎಲ್ಲ ವರದಿಗಳನ್ನು ಕ್ರೆಮ್ಲಿನ್ ನಿರಾಕರಿಸಿದ್ದು, ಈ ವರದಿಗಳು ಉಹಾಪೋಹ ಅಷ್ಟೇ ಎಂದು ಹೇಳಿದೆ.
ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವ ಪುಟಿನ್:ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈಗ ಸುಮಾರು 70 ವರ್ಷ ವಯಸ್ಸಾಗಿದೆ. ಅವರ ವಯಸ್ಸು 70 ಆದರೂ ಅವರು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ತಮ್ಮ ಆರೋಗ್ಯ ಹಾಗೂ ಯೌವನವನ್ನು ಕಾಪಾಡಿಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಹಲವು ದಂತಕತೆಗಳೇ ಇವೆ. ಒಟ್ಟಿನಲ್ಲಿ ಅವರು ತಮ್ಮ ಫಿಟ್ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ದಿನವಿಡೀ ಚಟುವಟಿಕೆಯಿಂದ ಇರಲು ಪುಟಿನ್ ಬಯಸುತ್ತಾರೆ. ಇದಕ್ಕಾಗಿ ಅವರು ವ್ಯಾಯಾಮ ಮಾಡುತ್ತಾರೆ. ರಷ್ಯಾದ ಅಧ್ಯಕ್ಷರಿಗೆ ಈಜು ಎಂದರೆ ತುಂಬಾ ಇಷ್ಟ.
ಇದನ್ನು ಓದಿ:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ 'ರಕ್ತದ ಕ್ಯಾನ್ಸರ್, ಆರೋಗ್ಯ ಗಂಭೀರ': ವರದಿ