ಚೆರ್ನೋಬಿಲ್ (ಉಕ್ರೇನ್): ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ಪಡೆಗಳು ವಶಪಡಿಸಿಕೊಂಡಿವೆ. ರಷ್ಯಾದ ಈ ಆಕ್ರಮಣದ ಬಗ್ಗೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಹಾನಿಗೊಳಗಾದ ಅಣು ವಿದ್ಯುತ್ ಸ್ಥಾವರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸ್ಥೆಯ ಡೈರೆಕ್ಟರ್ ಜನರಲ್ ರಾಫೆಲ್ ಮರಿಯಾನೊ ಗ್ರಾಸ್ಸಿ, ವಿಕಿರಣದ ಮಟ್ಟವು ಸಾಮಾನ್ಯವಾಗಿದ್ದರೂ, ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಪರಮಾಣು ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ನಾವು ಮಹಾ ವಿಪತ್ತಿಗೆ ತುಂಬಾ ಹತ್ತಿರವಾಗಿದ್ದೇವೆಯೇ ಎಂಬ ಬಗ್ಗೆ ನಮಗೆನೂ ತಿಳಿದಿಲ್ಲ, ಆದರೆ ಪರಿಸ್ಥಿತಿಯು ಸಂಪೂರ್ಣವಾಗಿ ಅಸಹಜವಾಗಿದೆ ಮತ್ತು ತುಂಬಾ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪರಮಾಣು ಶಕ್ತಿಯ ಅಪಾಯವನ್ನು ಯಾರೊಬ್ಬರು ಅರಿತಿಲ್ಲ, ಈಗ ರಷ್ಯಾ ಉಕ್ರೇನ್‌ನ ಅಣುಸ್ಥಾವರವನ್ನು ವಶಕ್ಕೆ ಪಡೆಯುವ ಮೂಲಕ ಮಾನವೀಯತೆ ಮೇಲೆ ಪ್ರಹಾರ ಮಾಡುತ್ತಿದೆ ಇದು ದುರಂತ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.