ತೆಗುಸಿಗಲ್ಪಾ, ಹೊಂಡುರಾಸ್: ಮಧ್ಯ ಅಮೆರಿಕದ ಹೊಂಡುರಾಸ್ ಮಹಿಳಾ ಜೈಲಿನಲ್ಲಿ ದುರಂತ ಘಟನೆಯೊಂದು ನಡೆದಿದೆ. ಮಹಿಳಾ ಜೈಲಿನೊಳಗೆ ನಡೆದ ಗ್ಯಾಂಗ್ವಾರ್ನಲ್ಲಿ ಅನೇಕ ಕೈದಿಗಳು ತಮ್ಮ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಇದನ್ನು ತಿಳಿದ ಕೈದಿಗಳ ಸಂಬಂಧಿಕರು ಜೈಲಿನ ಹೊರಗೆ ಜಮಾಯಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ಹೌದು, ಹೊಂಡುರಾಸ್ನ ಮಹಿಳಾ ಕಾರಾಗೃಹದಲ್ಲಿ ಮಂಗಳವಾರ ಗಲಭೆ ನಡೆದಿದೆ. ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 41 ಮಹಿಳೆಯರು ಸಾವನ್ನಪ್ಪಿದ್ದಾರೆ (Women Prisoners Died). ಜೈಲಿನೊಳಗೆ ಗ್ಯಾಂಗ್ವೊಂದರಿಂದ ಹಿಂಸಾಚಾರ ನಡೆದಿದೆ ಎಂದು ಇಲ್ಲಿನ ಅಧ್ಯಕ್ಷ ಕ್ಸೊಮಾರಾ ಕ್ಯಾಸ್ಟ್ರೋ ಖಚಿತಪಡಿಸಿದ್ದಾರೆ. ಗಲಭೆಯಲ್ಲಿ ಕನಿಷ್ಠ 26 ಮಹಿಳೆಯರು ಸುಟ್ಟು ಕರಕಲಾಗಿದ್ದು, ಇನ್ನುಳಿದ ಕೈದಿಗಳು ಗುಂಡೇಟು ಮತ್ತು ಚಾಕು ಇರಿತದಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ಬೆಳಗ್ಗೆ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ಕೈದಿಗಳ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಡೆಲ್ಮಾ ಆರ್ಡೊನೆಜ್ ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಹೊಂಡುರಾಸ್ ರಾಜಧಾನಿ ತೆಗುಸಿಗಲ್ಪಾದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ತಮಾರಾದ ಜೈಲಿನಲ್ಲಿ ಗಲಭೆಯಾಗಿದೆ. ಗಲಭೆಯ ನಂತರ, ವಿಧಿವಿಜ್ಞಾನ ತಂಡ ಆಗಮಿಸಿ 41 ಮಹಿಳಾ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇದೇ ವೇಳೆ, ಆಸ್ಪತ್ರೆಯಲ್ಲಿ ಏಳು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ. ನಂತರ ಸರ್ಕಾರವು ಜೈಲಿನೊಳಗಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಬಹಿರಂಗ ಪಡಿಸಿದೆ.