ವಾಷಿಂಗ್ಟನ್ (ಅಮೆರಿಕ): ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಿಲಿಕಾನ್ ವ್ಯಾಲಿಯ ಸ್ಟಾರ್ಟ್‌ಅಪ್ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಡೇಟಾ ಸುರಕ್ಷತೆ ಬಗ್ಗೆ ಮಾತನಾಡುವಾಗ ರಾಹುಲ್ ತಮ್ಮ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಅವರೊಂದಿಗೆ ಭಾರತದಿಂದ ಪ್ರಯಾಣಿಸಿದ ಕೆಲ ಪ್ರಮುಖ ಸಹಾಯಕರೊಂದಿಗೆ ಪ್ಲಗ್ ಮತ್ತು ಪ್ಲೇ ಸಭಾಂಗಣದಲ್ಲಿ ರಾಹುಲ್ ಕೃತಕ ಬುದ್ಧಿಮತ್ತೆಯ ವಿವಿಧ ಅಂಶಗಳ ಕುರಿತು ತಜ್ಞರ ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಂಡರು. ಡೇಟಾ, ಯಾಂತ್ರಿಕ ಕಲಿಕೆ ಮತ್ತು ಮಾನವಕುಲದ ಮೇಲೆ ಅವುಗಳ ಪರಿಣಾಮಗಳು ಹಾಗೂ ಆಡಳಿತ, ಸಮಾಜ ಕಲ್ಯಾಣ ಕ್ರಮಗಳು ಮತ್ತು ತಪ್ಪು ಮಾಹಿತಿಯಂತಹ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ರಾಹುಲ್ ಗಾಂಧಿ ಮಾತನಾಡಿ, ಡೇಟಾ ಹೊಸ ಸ್ವರ್ಣವಾಗಿದ್ದು, ಭಾರತದಂತಹ ದೇಶಗಳು ಅದರ ನೈಜ ಸಾಮರ್ಥ್ಯವನ್ನು ಅರಿತುಕೊಂಡಿವೆ. ಡೇಟಾ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಸೂಕ್ತ ನಿಯಮಾವಳಿಗಳನ್ನು ಹೊಂದುವ ಅಗತ್ಯವಿದೆ ಎಂದು ತಿಳಿಸಿದರು. ಆದಾಗ್ಯೂ, ಪೆಗಾಸಸ್ ಸ್ಪೈವೇರ್ ಮತ್ತು ಅಂತಹ ತಂತ್ರಜ್ಞಾನಗಳ ವಿಷಯದ ಕುರಿತು ಮಾತನಾಡಿ, ಇದರ ಬಗ್ಗೆ ನಾನು ಚಿಂತಿಸುವುದಿಲ್ಲ. ತನ್ನ ಫೋನ್ ಟ್ಯಾಪ್ ಆಗುತ್ತಿದೆ ಎಂದು ನನಗೆ ಗೊತ್ತಿದೆ ಎಂದೂ ಹೇಳಿದರು. ಇದೇ ವೇಳೆ ತಮಾಷೆಯಾಗಿ ತಮ್ಮ ಐಫೋನ್‌ನಲ್ಲಿ "ಹಲೋ! ಮಿಸ್ಟರ್ ಮೋದಿ" ಎಂದು ರಾಹುಲ್ ಹೇಳಿದರು.