ಗಾಝಾ : ಗಾಜಾ ಪಟ್ಟಿಯಲ್ಲಿ ಮತ್ತೊಂದು ಹಂತದ ಕದನ ವಿರಾಮ ಜಾರಿಗೊಳಿಸಲು ಕತಾರ್ ಹೊಸ ಪ್ರಸ್ತಾಪಗಳನ್ನು ಮಂಡಿಸಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. ಕದನವಿರಾಮಕ್ಕಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಪುನರಾರಂಭಿಸಲು ಕತಾರ್ ಪ್ರಯತ್ನಿಸುತ್ತಿದೆ. ಡಿಸೆಂಬರ್ 16 ರಿಂದ ನಾರ್ವೆಯಲ್ಲಿ ನಡೆದ ಅಘೋಷಿತ ಸಭೆಗಳಲ್ಲಿ ಉನ್ನತ ಮಟ್ಟದ ಕತಾರ್ ನಿಯೋಗವು ಇಸ್ರೇಲ್ ಅಧಿಕಾರಿಗಳೊಂದಿಗೆ ಈ ಪ್ರಸ್ತಾಪಗಳನ್ನು ಚರ್ಚಿಸುತ್ತಿದೆ ಎಂದು ಮೂಲಗಳು ಭಾನುವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.
"ಈಜಿಪ್ಟ್ ಸಹಯೋಗದೊಂದಿಗೆ, ಗಾಜಾದಲ್ಲಿ ಮಾನವೀಯ ಕದನ ವಿರಾಮಕ್ಕಾಗಿ ಹೊಸ ತಿಳುವಳಿಕೆಗಳನ್ನು ತಲುಪುವ ಪ್ರಯತ್ನದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ವಿನಿಮಯ ಒಪ್ಪಂದವನ್ನು ಪುನಾರಂಭಿಸಲು ಕತಾರ್ ಪ್ರಯತ್ನಿಸುತ್ತಿದೆ" ಎಂದು ಮೂಲಗಳು ತಿಳಿಸಿವೆ. ಗಾಜಾದಲ್ಲಿ ಹಲವಾರು ದಿನಗಳ ಮಾನವೀಯ ಕದನ ವಿರಾಮ ಘೋಷಣೆಗೆ ಪ್ರತಿಯಾಗಿ ಹಮಾಸ್ ವಶದಲ್ಲಿರುವ ಉಳಿದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಮತ್ತು ಇಸ್ರೇಲ್ ತನ್ನ ಬಂಧನದಲ್ಲಿರುವ ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲಿ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಲವಾರು ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಮೂವರು ಹಿರಿಯ ಇಸ್ರೇಲಿ ಅಧಿಕಾರಿಗಳನ್ನು ಬಿಡುಗಡೆ ಮಾಡಿಸಲು ಕತಾರ್ ಪ್ರಯತ್ನಿಸುತ್ತಿದೆ. ಹಮಾಸ್ನಿಂದ ಸೆರೆಹಿಡಿಯಲ್ಪಟ್ಟ ಮೂವರು ಇಸ್ರೇಲಿ ಸೈನಿಕರು ಗಾಜಾದಲ್ಲಿ ಇಸ್ರೇಲಿ ಸೈನ್ಯದಿಂದಲೇ ಆಕಸ್ಮಿಕವಾಗಿ ಕೊಲ್ಲಲ್ಪಟ್ಟ ನಂತರ ಕತಾರ್ ಹೊಸದಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಆರಂಭಿಸಿದೆ.