ಲಂಡನ್( ಇಂಗ್ಲೆಂಡ್): ಜಿಂಕೆ ಕೊಂಬಿನ ರಕ್ತದಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಳಕ ಮಾಡುತ್ತಾರಂತೆ, ಹೌದು ವಿಚಿತ್ರ ಅನ್ನಿಸಿದರೂ ಇದು ಸತ್ಯ. ಯಾಕೆಂದರೆ ಪುರುಷ ಶಕ್ತಿ( ಪೌರುಷ) ಹೆಚ್ಚಿಸಿಕೊಳ್ಳಲು ರಷ್ಯಾಧಿಪತಿ ಈ ಸ್ನಾನ ಮಾಡ್ತಾರಂತೆ. ಇದಕ್ಕಾಗಿಯೇ ಅವರು ಥೈರಾಯ್ಡ್ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾಕ್ಟರ್ ವೊಬ್ಬರ ನೆರವು ಪಡೆದುಕೊಳ್ಳುತ್ತಾರೆ ಎಂಬ ಅಂಶವನ್ನು ಇಂಗ್ಲೆಂಡ್ನ ಡೈಲಿ ಮೇಲ್ ವರದಿ ಮಾಡಿದೆ.
ಇಂತಹದ್ದೊಂದು ಸ್ನಾನದ ಚಿಕಿತ್ಸೆಯನ್ನು ಪರಿಚಯಿಸಿದ್ದು ಈಗಿನ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು. 2000 ನೇ ಇಸ್ವಿಯ ಮಧ್ಯಂತರದಲ್ಲಿ ಈ ತರಹ ಸ್ನಾನ ಮಾಡಿದರೆ ಪುರುಷತ್ವದ ಶಕ್ತಿ ವೃದ್ಧಿಸುತ್ತದೆ ಎಂಬ ವಿಷಯವನ್ನು ಪುಟಿನ್ಗೆ ಶೋಯಿಗು ತಿಳಿಸಿದ್ದರಂತೆ. ಅದರಂತೆ ಜಿಂಕೆ ಕೊಂಬಿನ ರಕ್ತದಿಂದ ಬಾತ್ ಟಬ್ನಲ್ಲಿ ಪುಟನ್ ಜಳಕ ಮಾಡಿದ್ದರಂತೆ.
ಜಿಂಕೆ ಕೊಂಬಿನ ರಕ್ತದ ಜಳಕ ಯಾಕೆ ಮಾಡ್ತಾರೆ?:ಸೈಬೀರಿಯಾದ ಅಲ್ಟಾಯ್‌ನಲ್ಲಿರುವ ಕೆಂಪು ಜಿಂಕೆಗಳ ಕೊಂಬುಗಳಲ್ಲಿನ ರಕ್ತ ಮಾನವ ದೇಹದ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತವೆ ಎಂಬ ನಂಬಿಕೆ ಇದೆ. ಇದಕ್ಕೆ ಯಾವುದೇ ವೈಜ್ಞಾನಿಕ ಹಾಗೂ ವೈದ್ಯಕೀಯ ಪುರಾವೆಗಳಿಲ್ಲ. ಆದರೆ ಸೈಬಿರಿಯಾ ಹಾಗೂ ರಷ್ಯಾದಲ್ಲಿ ಮಾತ್ರ ಇದು ಜನಜನಿತವಾಗಿದೆ.
ಪುಟಿನ್ ಉಕ್ರೇನ್ ಮೇಲೆ ಯುದ್ಧ ಯಾಕೆ ಘೋಷಿಸಿದರು ಗೊತ್ತಾ?:ಪುಟಿನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ರಷ್ಯಾದ ಜನರ ಮನಸ್ಸನ್ನು ಬೇರೆಡೆ ತಿರುಗಿಸುವುದು ಹಾಗೂ ತಮ್ಮ ಅನಾರೋಗ್ಯ ಜನತೆಗೆ ಗೊತ್ತಾಗದಂತೆ ಕಾಪಿಟ್ಟುಕೊಳ್ಳುವ ಉದ್ದೇಶದಿಂದ ಉಕ್ರೇನ್ ಮೇಲೆ ಪುಟಿನ್ ಯುದ್ಧವನ್ನು ಘೋಷಿಸಿದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇಂತಹದ್ದೊಂದು ಸ್ಫೋಟಕ ಸುದ್ದಿಯನ್ನು ಅಲ್ಲಿ ತನಿಖಾ ವರದಿಗಾರರು ಮಾಡಿದ್ದಾರೆ. ಆದರೆ, ಇಂತಹ ಸುದ್ದಿಗಳನ್ನು ರಷ್ಯಾದಲ್ಲಿ ಪ್ರಸಾರ ಮಾಡುವುದನ್ನು ಪುಟಿನ್ ನಿಷೇಧಿಸಿದ್ದಾರೆ. ಈ ಕಾರಣದಿಂದ ತನಿಖಾ ವರದಿಗಾರರು ಬೇರೆಡೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಹೇಳಿದೆ.
ರಷ್ಯಾ ಅಧ್ಯಕ್ಷರಷ್ಟೇ ಪ್ರಾಣಿ ರಕ್ತದಿಂದ ಸ್ನಾನ ಮಾಡುವ ಹಾಗೂ ಚಿಕಿತ್ಸೆ ಪಡೆಯುತ್ತಿಲ್ಲ. ಇಂತಹದ್ದೊಂದು ದೊಡ್ಡ ಪಟ್ಟಿಯೇ ರಷ್ಯಾ ಅಧ್ಯಕ್ಷರ ಕ್ಲೆಮ್ಲಿನ್ನಲ್ಲಿ ಇದೆ. ಇದರಲ್ಲಿ ಮಾಸ್ಕೋ ಮೇಯರ್ ಸೆಗೊಯ್ ಸೋನಿಯಾನಿನ್, ಅಲೆಕ್ಸ್ ಮಿಲ್ಲರ್ ಸೇರಿದಂತೆ ಇನ್ನಿತರರು ಇದ್ದಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಅವರಷ್ಟೇ ಅಲ್ಲ ಇತರ ಅಧಿಕಾರಿಗಳು ಕರೇಲಿಯನ್ ರೆಸಾರ್ಟ್ ಕಿವಾಚ್ ಅನ್ನು ಆನಂದಿಸುತ್ತಾರೆ ಎಂದು ಹೇಳಲಾಗುತ್ತದೆ. ನಿತ್ಯವೂ ಅವರೆಲ್ಲ ಜಿಂಕೆ ಕೊಂಬಿನ ರಕ್ತದ ಇಂಜೆಕ್ಷನ್ ಪಡೆಯುತ್ತಾರೆ ಎಂದೂ ಹೇಳಲಾಗಿದೆ.
ರಷ್ಯಾದಲ್ಲಿ ಇದಕ್ಕೆ ಶತಮಾನದ ಇತಿಹಾಸ ಇದೆ:ಜಿಂಕೆಯಿಂದಕತ್ತರಿಸಿದ ಕೊಂಬಿನ ರಕ್ತದಲ್ಲಿ ಸ್ನಾನ ಮಾಡುವುದು ಮತ್ತು ಅದನ್ನು ಕುಡಿಯುವ ಸಂಪ್ರದಾಯಕ್ಕೆ ರಷ್ಯಾದಲ್ಲಿ ಶತಮಾನಗಳ ಇತಿಹಾಸವಿದೆ ಎಂದು ಭಾವಿಸಲಾಗಿದೆ. ಚೀನಾ ಮತ್ತು ಕೊರಿಯಾದಲ್ಲೂ ಇಂತಹದ್ದೊಂದು ಸಂಪ್ರದಾಯ ಅಸ್ತಿತ್ವದಲ್ಲಿದೆ ಎಂದು ಸೈಬೀರಿಯನ್ ಟೈಮ್ಸ್ ವರದಿ ಮಾಡಿದೆಯಂತೆ.
ಜಿಂಕೆ ಕೊಂಬಿನ ರಕ್ತದಿಂದಾಗುವ ಪ್ರಯೋಜನಗಳೇನು?:ಜಿಂಕೆ ಕೊಂಬಿನ ರಕ್ತದಿಂದ ಸ್ನಾನ ಮಾಡುವುದು ಮತ್ತು ಕುಡಿಯುವುದರಿಂದ ಅಸಂಖ್ಯಾತ ಪ್ರಯೋಜನಗಳಿವೆಯಂತೆ. ಮಹಿಳೆಯರ ಯೌವನ ಹೆಚ್ಚುತ್ತದೆಯಂತೆ. ಪುರುಷರ ಕಾಮಾಸಕ್ತಿ ದ್ವಿಗುಣಗೊಳ್ಳುತ್ತದೆಯಂತೆ. ಅಲ್ಲದೇ ಅವರ ಲೈಂಗಿಕ ಕಾರ್ಯಕ್ಷಮತೆ ಭಾರಿ ಪ್ರಮಾಣದಲ್ಲಿ ಏರುತ್ತದೆ ಎಂದು ಸೈಬೀರಿಯನ್ ಟೈಮ್ಸ್ ವರದಿಯಲ್ಲಿ ಹೇಳಲಾಗಿದೆಯಂತೆ.
ಅಲ್ಟಾಯ್ ಪರ್ವತಗಳಲ್ಲಿನ ಒಂದು ಫಾರ್ಮ್ ತನ್ನ ವೆಬ್‌ಸೈಟ್‌ನಲ್ಲಿಈ ಬಗ್ಗೆ ಬರೆದುಕೊಂಡಿದೆ. ಕೆಂಪು ಜಿಂಕೆ ಕೊಂಬುಗಳಿಂದ ಹೊರತೆಗೆಯುವ ರಕ್ತ ಮನುಷ್ಯನ ದೇಹಕ್ಕೆ ಬಲವಾದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಪುರುಷರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಇದು ದೇಹದ ಮೂಳೆಗಳು, ಸ್ನಾಯುಗಳು, ಹಲ್ಲುಗಳು, ಕಣ್ಣಿನ ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನ ಬಲಪಡಿಸುತ್ತದೆ. ಪ್ಲೆರೈಸಿ, ನ್ಯುಮೋನಿಯಾ, ಅಸ್ತಮಾ, ಕೀಲು ನೋವು, ಆಸ್ಟಿಯೊಪೊರೋಸಿಸ್ ಮತ್ತು ಬೆನ್ನುಮೂಳೆಯ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಡೈಲಿ ಮೇಲ್ ವರದಿಯಲ್ಲಿ ಹೇಳಲಾಗಿದೆ.
ಇದನ್ನು ಓದಿ;ರಷ್ಯಾದ ಬೆಲ್ಗೊರೊಡ್ ಮೇಲೆ ದಾಳಿ ವಿಚಾರ: ಚರ್ಚೆಗೆ ಝೆಲೆನ್ಸ್ಕಿ ನಕಾರ