ವಾಷಿಂಗ್ಟನ್ (ಅಮೆರಿಕ):ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆಪ್ಟೆಂಬರ್ 7ರಿಂದ 10ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಉಕ್ರೇನ್ ಬಿಕ್ಕಟ್ಟು ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಇತರ ನಾಯಕರೊಂದಿಗೆ ಬೈಡನ್ ಚರ್ಚಿಸಲಿದ್ದಾರೆ. ಜಿ20 ನಾಯಕತ್ವದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನ ಮಂಗಳವಾರ ತಿಳಿಸಿದೆ.
2022ರ ಡಿಸೆಂಬರ್ 1ರಂದು ಇಂಡೋನೇಷ್ಯಾ ನಂತರ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಜಿ20 ವಿಶ್ವ ನಾಯಕರ ಶೃಂಗಸಭೆ ನಡೆಯಲಿದೆ. ಇದು ಭಾರತದಲ್ಲಿ ಜಾಗತಿಕ ನಾಯಕರು ಪಾಲ್ಗೊಳ್ಳುವ ಶೃಂಗಸಭೆಗಳಲ್ಲೇ ಅತಿ ದೊಡ್ಡದು ಎಂದು ಹೇಳಲಾಗುತ್ತಿದೆ.
''ಬೈಡನ್ ಜಿ20 ಪಾಲುದಾರ ರಾಷ್ಟ್ರಗಳೊಂದಿಗೆ ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಜಂಟಿ ಪ್ರಯತ್ನಗಳ ಕುರಿತಂತೆ ಚರ್ಚೆ ಮಾಡಲಿದ್ದಾರೆ. ಶುದ್ಧ ಇಂಧನ ಪರಿವರ್ತನೆ, ಹವಾಮಾನ ಬದಲಾವಣೆ ಹಾಗೂ ಉಕ್ರೇನ್‌ನಲ್ಲಿ ಯುದ್ಧದಿಂದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ತಗ್ಗಿಸುವುದರ ಕುರಿತು ಮಾತುಕತೆ ನಡೆಸಲಿದ್ದಾರೆ'' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ
"ಜಾಗತಿಕ ಸವಾಲುಗಳನ್ನು ಎದುರಿಸುವುದೂ ಸೇರಿದಂತೆ ಬಡತನದ ವಿರುದ್ಧ ಹೋರಾಟ ಮಾಡಲು ವಿಶ್ವ ಬ್ಯಾಂಕ್ ಸೇರಿದಂತೆ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವುದರ ಬಗ್ಗೆಯೂ ಚರ್ಚಿಸಲಾಗುತ್ತದೆ'' ಎಂದು ಜೀನ್-ಪಿಯರ್ ಹೇಳಿದ್ದಾರೆ.
''ಶೃಂಗಸಭೆಯ ನಾಯಕರೊಂದಿಗೆ ಬೈಡನ್ ಅವರ ಮಾತುಕತೆಯು ಹವಾಮಾನ ಬದಲಾವಣೆ, ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಮತ್ತು ಇತರ ಜಾಗತಿಕ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತದೆ'' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಏನಿದು ಜಿ-20?: ಜಿ20 ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರಸರ್ಕಾರಿ ವೇದಿಕೆ. ಜಾಗತಿಕ ಜಿಡಿಪಿಯ ಸುಮಾರು ಶೇ.85ರಷ್ಟು ಪಾಲು ಹೊಂದಿರುವ ರಾಷ್ಟ್ರಗಳು ಇದರ ಸದಸ್ಯರಾಗಿದ್ದಾರೆ. ಜಾಗತಿಕ ವ್ಯಾಪಾರದ ಶೇ.75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಜಿ20 ಪ್ರತಿನಿಧಿಸುತ್ತದೆ.
ಸದಸ್ಯರು ಯಾರೆಲ್ಲಾ?: ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ.
ಇದನ್ನೂ ಓದಿ:"ಚೀನಾ ಜಾಗತಿಕ ಆರ್ಥಿಕತೆಗೆ ಟಿಕ್ ಟಿಕ್ ಟೈಮ್ ಬಾಂಬ್": ಡ್ರ್ಯಾಗನ್ ಆರ್ಥಿಕ ಪರಿಸ್ಥಿತಿ ಟೀಕಿಸಿದ ಜೋ ಬೈಡನ್