ನವದೆಹಲಿ:ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಜೊತೆ ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ, ಡೆನ್ಮಾರ್ಕ್ ಪ್ರಧಾನಿ ರಷ್ಯಾದ ನೀತಿಯನ್ನು ಖಂಡಿಸಿದರು. ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣ ನಡೆಸುತ್ತಿವೆ. ಡೆನ್ಮಾರ್ಕ್ ಇದನ್ನು ಬಲವಾಗಿ ವಿರೋಧಿಸುತ್ತದೆ ಎಂದರು.
ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಇಬ್ಬರು ಪ್ರಧಾನ ಮಂತ್ರಿಗಳು ಕಳವಳ ವ್ಯಕ್ತಪಡಿಸಿದರು. ಅವರು ಉಕ್ರೇನ್‌ನಲ್ಲಿ ನಾಗರಿಕರ ಸಾವುಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಿದರು. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಮತ್ತು ಯುರೋಪ್ ಸಹಭಾಗಿತ್ವದ ಮಹತ್ವ, ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ, ವ್ಯಾಪಾರ, ಹೂಡಿಕೆ ಮತ್ತು ಭೌಗೋಳಿಕ ಒಪ್ಪಂದಗಳ ಮೇಲಿನ ಮಾತುಕತೆಗಳ ಪುನರಾರಂಭದ ಬಗ್ಗೆ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ವಿಶ್ವಸಂಸ್ಥೆಯಲ್ಲಿ ಭಾತರತಕ್ಕೆ ಡೆನ್ಮಾರ್ಕ್ ಬೆಂಬಲ:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಾರತದ ಶಾಶ್ವತ ಸದಸ್ಯತ್ವಕ್ಕೆ ಡೆನ್ಮಾರ್ಕ್ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಹೇಳಿದರು. 2025 -2026ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವಕ್ಕಾಗಿ ಡೆನ್ಮಾರ್ಕ್‌ನ ಉಮೇದುವಾರಿಕೆಯ ಪರವಾಗಿ ಭಾರತ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ತಿಳಿಸಿದ್ದಾರೆ.
ಓದಿ:ಭಾರತಕ್ಕೆ ಭೇಟಿ ನೀಡಲು ಐವರಿಗೆ ಸ್ಪೂರ್ತಿಯಾಗಿ: ಡೆನ್ಮಾರ್ಕ್‌ನ ಭಾರತೀಯರಿಗೆ ಮೋದಿ ಕರೆ