ಇಸ್ಲಾಮಾಬಾದ್(ಪಾಕಿಸ್ತಾನ): ಇಮ್ರಾನ್ ಖಾನ್ಗೆ ಅಧಿಕಾರ ಕಳೆದುಕೊಂಡು ಪ್ರಧಾನಿ ಪಟ್ಟದಿಂದ ಇಳಿಯುವುದು ಬಹುತೇಕ ಖಚಿತವಾದಂತೆ ತೋರುತ್ತಿದೆ. ಮುತ್ತಾಹಿದ್ ಖ್ವಾಮಿ ಮೂಮೆಂಟ್ (MQM) ಪಕ್ಷದ ಸಚಿವರು ರಾಜೀನಾಮೆ ನೀಡಿದ ಬೆನ್ನಲ್ಲೇ ಇಮ್ರಾನ್ ಖಾನ್ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಮ್ರಾನ್ ಖಾನ್ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಾಕಿಸ್ತಾನದ ಗೃಹಸಚಿವ ಶೇಖ್ ರಶೀದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮುತ್ತಾಹಿದ ಖ್ವಾಮಿ ಮೂಮೆಂಟ್ನ ಸೈಯದ್ ಅಮಿನುಲ್ ಹಕ್ ಮತ್ತು ಫರೋಗ್ ನಸೀಮ್ ರಾಜೀನಾಮೆ ನೀಡಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿರುವುದು ರಾಜೀನಾಮೆ ಘೋಷಿಸುವ ಸಲುವಾಗಿಯೇ ಎಂದು ಹೇಳಿದ್ದಾರೆ.
ಪಾಕಿಸ್ತಾನ್ ಪೀಪಲ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ನೇತೃತ್ವದ ಪ್ರತಿಪಕ್ಷಗಳೊಂದಿಗೆ ತಮ್ಮ ಪಕ್ಷವು ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಎಂಕ್ಯೂಎಂ-ಪಿ ಹಿರಿಯ ನಾಯಕ ಫೈಸಲ್ ಸಬ್ಜ್ವಾರಿ ಬುಧವಾರ ಟ್ವೀಟ್ ಮಾಡಿದ್ದು, ಈ ಮೂಲಕ ಇಮ್ರಾನ್ ಖಾನ್ ಪಕ್ಷವಾದ ಪಿಟಿಐನಿಂದ ಮತ್ತೊಂದು ಪಕ್ಷ ಹೊರಬಂದಿದೆ. ಈ ಮೂಲಕ ಅವಿಶ್ವಾಸ ನಿರ್ಣಯದಲ್ಲಿ ಮುತ್ತಾಹಿದ್ ಖ್ವಾಮಿ ಮೂಮೆಂಟ್ ಕೂಡಾ ಇಮ್ರಾನ್ ವಿರುದ್ಧವಾಗಿರಲಿದೆ.
ಮತ್ತೊಂದೆಡೆ ಇಮ್ರಾನ್ ಖಾನ್ ಬುಧವಾರ ಫೆಡರಲ್ ಕ್ಯಾಬಿನೆಟ್‌ನ ವಿಶೇಷ ಅಧಿವೇಶನವನ್ನು ಕರೆದಿದ್ದು, ವಿಶೇಷ ಆಹ್ವಾನದ ಮೇರೆಗೆ ಸರ್ಕಾರದ ಮೈತ್ರಿಕೂಟದ ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿವೆ. ಈ ಸಭೆಯ ಅಧ್ಯಕ್ಷತೆಯನ್ನು ಸ್ವತಃ ಇಮ್ರಾನ್ ಖಾನ್ ವಹಿಸಿಕೊಳ್ಳಲಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಇದನ್ನೂ ಓದಿ:ಪ್ರತಿಪಕ್ಷಗಳೊಂದಿಗೆ MQM ಒಪ್ಪಂದ: ಅಧಿಕಾರ ಕಳೆದುಕೊಳ್ಳುತ್ತಾರಾ ಪಾಕ್ ಪ್ರಧಾನಿ ಇಮ್ರಾನ್ ಖಾನ್?