ಇಸ್ಲಾಮಾಬಾದ್(ಪಾಕಿಸ್ತಾನ):ಇಮ್ರಾನ್ ಖಾನ್ ಪದಚ್ಯುತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ನೂತನ ಪ್ರಧಾನಿಯ ಆಯ್ಕೆಯಾಗಿದೆ. ವಿಪಕ್ಷ ಮೈತ್ರಿಕೂಟದ ಪ್ರಮುಖ ಹಾಗೂ ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿದ್ದಾರೆ. 342 ಸದಸ್ಯ ಬಲದ ಪಾಕಿಸ್ತಾನ ಸಂಸತ್ತು 'ನ್ಯಾಷನಲ್ ಅಸೆಂಬ್ಲಿ'ಯಲ್ಲಿ ಪಿಟಿಐ ಪಕ್ಷದ ನಾಯಕ ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆ ವೇಳೆ ಸೋಲು ಕಂಡಿದ್ದರು. ಹೀಗಾಗಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇದೀಗ 174 ಸದಸ್ಯರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ನೂತನ ಪ್ರಧಾನಿ ಆಯ್ಕೆ ಮಾಡುವ ಉದ್ದೇಶದಿಂದ ಇಂದು ಪಾಕಿಸ್ತಾನ ಸಂಸತ್ತಿನ ಅಧಿವೇಶನ ಕರೆಯಲಾಗಿತ್ತು. ಈ ವೇಳೆ ಪಿಟಿಐ(ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್) ಪಕ್ಷದ ಸದಸ್ಯರು ಅಧಿವೇಶನದಿಂದ ಹೊರನಡೆದರು. ಇದರ ಜೊತೆಗೆ ಮತದಾನ ಬಹಿಷ್ಕರಿಸಿ, ಸದನದಿಂದ ಹೊರನಡೆದರು.
ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ 70 ವರ್ಷದ ಶೆಹಬಾಜ್ ಷರೀಫ್ ಹಾಗೂ ಪಿಟಿಐ ಪಕ್ಷದ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಪ್ರಧಾನಿ ರೇಸ್ಗೋಸ್ಕರ ನಾಮಪತ್ರ ಸಲ್ಲಿಸಿದ್ದರು. ಆದರೆ, ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೂ ಸ್ವಲ್ಪ ಸಮಯ ಮುಂಚಿತವಾಗಿ ಖುರೇಷಿ ರಾಷ್ಟ್ರೀಯ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಈ ರೇಸ್ನಿಂದ ಹೊರಬಿದ್ದಿದ್ದರು. ಹೀಗಾಗಿ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆಯಾಗಿದ್ದಾರೆ.