ನ್ಯೂಜೆರ್ಸಿ(ಅಮೆರಿಕಾ):ಅಮೆರಿಕದ ನ್ಯೂಜೆರ್ಸಿಯಲ್ಲಿನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿ ಹೊರಹೋದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಅಪರೂಪದ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದೆ. ಅಚ್ಚರಿಯ ಸಂಗತಿ ಎಂದರೆ, ಇವರೆಲ್ಲರೂ ಈ ಶಾಲೆಯಲ್ಲಿ ವ್ಯಾಸಂಗ ಅಥವಾ ಇಲ್ಲಿ ಕೆಲಸ ಮಾಡಿದ ಹಲವಾರು ವರ್ಷಗಳ ತರುವಾಯ ರೋಗ ಪತ್ತೆಯಾಗಿದೆ.
ಇಷ್ಟು ಪ್ರಮಾಣದ ಜನರಿಗೆ ವಿಚಿತ್ರ ಎಂಬಂತೆ ವಕ್ಕರಿಸಿದ ಕ್ಯಾನ್ಸರ್ ಮೂಲದ ಬಗ್ಗೆ ಪತ್ತೆ ಮಾಡಲು ಅಲ್ಲಿನ ಆಡಳಿತ ತನಿಖೆಗೆ ಸೂಚಿಸಿದೆ. ನ್ಯೂಜೆರ್ಸಿಯಲ್ಲಿನ ಕೊಲೊನಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಅಥವಾ ಕೆಲಸ ಮಾಡಿದ ಬಹುಪಾಲು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಅಪರೂಪದ ಕಾಯಿಲೆಯಾದ ಮೆದುಳಿನಲ್ಲಿ ಗಡ್ಡೆ ಉಂಟು ಮಾಡುವ 'ಗ್ಲಿಯೊಬ್ಲಾಸ್ಟೊಮಾ' ಸೋಂಕು ಕಾಣಿಸಿಕೊಂಡಿದೆ.
ಒಂದೇ ಕುಟುಂಬ ಮೂವರಿಗೆ ಸೋಂಕು:ಅದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅಲ್ ಲುಪಿಯಾನೊ ಎಂಬಾತ 20 ವರ್ಷಗಳ ಹಿಂದೆ ಬ್ರೈನ್ ಟ್ಯೂಮರ್ ರೋಗದಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡ ಬಳಿಕ ಈ ವಿಚಿತ್ರ ಘಟನೆ ಬೆಳಕಿಗೆ ಬಂದು, ಸಂಚಲನ ಉಂಟುಮಾಡಿದೆ. ಅಲ್ ಲುಪಿಯಾನೋ ಅವರು ತಮ್ಮ ಸಹೋದರಿಯೂ ಇದೇ ಕಾಯಿಲೆಗೆ ಮರಣ ಹೊಂದಿದ್ದಾರೆ. ಅಲ್ಲದೇ, ಅವರ ಪತ್ನಿಯೂ ಕೂಡ 'ಗ್ಲಿಯೊಬ್ಲಾಸ್ಟೊಮಾ'ದಿಂದ ಬಳಲಿ ಕಳೆದ ತಿಂಗಳು ತೀರಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.