ಸ್ಟಾಕ್‌ಹೋಮ್ (ಸ್ವೀಡನ್): ಸಾಹಿತ್ಯ ವಿಭಾಗದ ಪ್ರತಿಷ್ಟಿತ ನೊಬೆಲ್ ಪ್ರಶಸ್ತಿಯನ್ನು ನಾರ್ವೆಯ ಲೇಖಕ ಜಾನ್ ಫಾಸ್ಸೆ ಅವರಿಗೆ ಇಂದು ಘೋಷಿಸಲಾಗಿದೆ. ದಮನಿತರ ಧ್ವನಿಯಾಗುವ ಇವರ ನವೀನ ನಾಟಕಗಳು ಮತ್ತು ಗದ್ಯಗಳಿಗಾಗಿ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದೆ.
1999ರಲ್ಲಿ 'ನೋಕಾನ್ ಕೆಜೆಮ್ ಟಿಲ್ ಎ ಕಮ್ಮೆ' ಎಂಬ ನಾಟಕದೊಂದಿಗೆ ಜಾನ್ ಫಾಸ್ಸೆ ನಾಟಕಕಾರನಾಗಿ ಮುನ್ನೆಲೆಗೆ ಬಂದರು. ಮನುಷ್ಯನ ಆತಂಕ, ದುಗುಡ ಹಾಗೂ ಅಸೂಯೆಯನ್ನು ತೊಡೆದುಹಾಕುವ ಕುರಿತ ಮನೋಜ್ಞ ಸಾಹಿತ್ಯವೇ ಇವರನ್ನು ಇದೀಗ ನೊಬೆಲ್ ಪ್ರಶಸ್ತಿಯವರೆಗೆ ಕರೆತಂದಿದೆ. ನಾರ್ವೇಜಿಯನ್ ಭಾಷೆಯಲ್ಲಿ ಅಗಾಧ ಸಾಹಿತ್ಯ ಕೃಷಿಯನ್ನು ಜಾನ್ ಫಾಸ್ಸೆ ಮಾಡಿದ್ದಾರೆ.
ನಾಟಕಗಳು, ಕಾದಂಬರಿಗಳು, ಕವನ ಸಂಗ್ರಹಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಅನುವಾದಗಳ ಸಂಪತ್ತನ್ನು ಇವರ ಕೃತಿಗಳು ಒಳಗೊಂಡಿವೆ. ಇಂದು ವಿಶ್ವದ ಅತ್ಯಂತ ವ್ಯಾಪಕವಾಗಿ ಪ್ರದರ್ಶನ ನೀಡಿದ ನಾಟಕಕಾರರಲ್ಲಿ ಫಾಸ್ಸೆ ಕೂಡಾ ಒಬ್ಬರು. ತಮ್ಮ ಗದ್ಯ ಸಾಹಿತ್ಯಕ್ಕಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ತಿಳಿಸಿದೆ.
ಜಾನ್ ಫಾಸ್ಸೆ ಸಮಕಾಲೀನ ರಂಗಭೂಮಿಯಲ್ಲಿ ಪ್ರಮುಖ ನಾವೀನ್ಯಕಾರರಾಗಿಯೂ ಪರಿಗಣಿಸಲ್ಪಟ್ಟವರು. ತಮ್ಮ ಜೀವನದಲ್ಲಿ ಕಂಡ ದೈನಂದಿನ ಸನ್ನಿವೇಶಗಳನ್ನೇ ಸಾಹಿತ್ಯದ ಮೂಲಕ ಪ್ರಸ್ತುತಪಡಿಸುತ್ತಾರೆ. ಅತ್ಯಂತ ಪ್ರಭಾವಶಾಲಿ ಮಾನವ ಭಾವನೆಗಳನ್ನೂ ಅಷ್ಟೇ ಸರಳ ಪದ ರಚನೆ ಹಾಗೂ ತಮ್ಮ ನಾಟಕಗಳಲ್ಲಿ ವ್ಯಕ್ತಪಡಿಸುತ್ತಾರೆ ಎಂದು ಅಕಾಡೆಮಿ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.