ಸ್ಟಾಕ್‌ಹೋಮ್: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸೋಮವಾರ ಆರ್ಥಿಕ ವಿಜ್ಞಾನ ವಿಭಾಗದಲ್ಲಿ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರವನ್ನು ಘೋಷಿಸಿದೆ. ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ನೀಡುವ ಸ್ವೆರಿಜಸ್ ರಿಕ್ಸ್‌ಬ್ಯಾಂಕ್ ಪುರಸ್ಕಾರವನ್ನು ಯುಎಸ್‌ಎ, ವಾಷಿಂಗ್ಟನ್ ಡಿಸಿಯ ದಿ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಷನ್ನ ಬೆನ್ ಎಸ್. ಬರ್ನಾಂಕೆ, ಯುಎಸ್‌ಎ ಚಿಕಾಗೋ ವಿಶ್ವವಿದ್ಯಾಲಯದ ಡೌಗ್ಲಾಸ್ ಡಬ್ಲ್ಯೂ. ಡೈಮಂಡ್ ಹಾಗೂ ಸೇಂಟ್ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಫಿಲಿಪ್ ಹೆಚ್.ಡೈಬ್ವಿಗ್ ಅವರಿಗೆ ನೀಡಿ ಗೌರವಿಸಿದೆ.
ಈ ಮೂವರು ಕೈಗೊಂಡ ಬ್ಯಾಂಕ್‌ಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆಗಾಗಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ವರ್ಷದ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿ ವಿಜೇತರಾದ ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್ ಅವರು ಆರ್ಥಿಕತೆಯಲ್ಲಿ ಬ್ಯಾಂಕುಗಳ ಪಾತ್ರ, ವಿಶೇಷವಾಗಿ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್ಗಳ ಪಾತ್ರದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಗಮನಾರ್ಹವಾಗಿ ಸುಧಾರಿಸಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ತಿಳಿಸಿದ್ದಾರೆ.
ಈ ಬಾರಿ ಆರು ದಿನಗಳಲ್ಲಿ ಆರು ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಇಂದು ಕೊನೆಯ ಪುರಸ್ಕೃತರನ್ನು ಘೋಷಿಸಲಾಯಿತು. ಅ. 3ರಿಂದ ವಿವಿಧ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿ ಘೋಷಣೆ ಪ್ರಾರಂಭವಾಗಿದ್ದು, ಸೋಮವಾರ ಮಾನವ ವಿಕಾಸದ ಸಂಶೋಧನೆಗಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.