ಜೆರುಸಲೇಂ:ಕಳೆದ ಹಲವು ದಿನಗಳಿಂದ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಕದನ ವಿರಾಮದ ಬಗ್ಗೆ ಹಲವು ಜಾಗತಿಕ ನಾಯಕರು ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾತ್ಕಾಲಿಕ ಕದನ ವಿರಾಮದ ಮಾತುಕತೆಗಳ ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಮತ್ತೊಮ್ಮೆ ಗಾಜಾದಲ್ಲಿ ಕದನ ವಿರಾಮದ ಸಾಧ್ಯತೆಯನ್ನು ಅಲ್ಲಗಳೆದರು.
"ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳಿಗೆ ಕೊನೆ ಹಾಡಲು ಬಯಸುತ್ತೇನೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಯಾವುದೇ ಕದನ ವಿರಾಮ ಇಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತಿದ್ದೇನೆ" ಎಂದು ನೆತನ್ಯಾಹು ಹೇಳಿದರು.
ಒತ್ತೆಯಾಳುಗಳ ಬಿಡುಗಡೆಯಾಗದೆ ಕದನ ವಿರಾಮ ಇಲ್ಲ: ಹಮಾಸ್ ಉಗ್ರರು ಅಪಹರಿಸಿರುವ ಆರು ಮಂದಿ ಅಮೆರಿಕನ್ನರು ಸೇರಿದಂತೆ 12ಕ್ಕೂ ಹೆಚ್ಚು ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆಗಳು ನಡೆಯುತ್ತಿವೆ. ಈ ನಡುವೆ ಕದನ ವಿರಾಮದ ಬಗ್ಗೆ ಮಾತನಾಡಿದ ಪ್ರಧಾನಿ, ನಾವು ಎಲ್ಲಾ ಮೂಲಗಳಿಂದ ಕೇಳುತ್ತಿರುವ ಎಲ್ಲಾ ರೀತಿಯ ಸುಳ್ಳು ವದಂತಿಗಳನ್ನು ಕೊನೆಗೊಳಿಸುತ್ತಿದ್ದೇವೆ. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಘೋಷಿಸುವುದಿಲ್ಲ ಎಂದಿದ್ದಾರೆ.
ಹಮಾಸ್ ಸುರಂಗಗಳ ನಾಶ: ನಾವು ಹಮಾಸ್ ಅನ್ನು ಗೆಲ್ಲಲು ಬಿಡುವುದಿಲ್ಲ. ನಾವು ದಕ್ಷಿಣ ಇಸ್ರೇಲ್ನಲ್ಲಿ ನಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುತ್ತೇವೆ. ನಮ್ಮ ಜೀವನವನ್ನು ಮುಂದುವರಿಸುತ್ತೇವೆ. ಭೂ ಆಕ್ರಮಣದ ಆರಂಭದಿಂದಲೂ ಗಾಜಾದಲ್ಲಿ 130ಕ್ಕೂ ಹೆಚ್ಚು ಹಮಾಸ್ ಸುರಂಗಗಳನ್ನು ನಾಶಪಡಿಸಲಾಗಿದೆ. ಕಮಾಂಡ್ ಸೆಂಟರ್‌ಗಳಂತಹ ಇತರ ಭೂಗತ ಹಮಾಸ್ ಮೂಲಸೌಕರ್ಯಗಳನ್ನೂ ಸಹ ನಾಶಪಡಿಸಲಾಗಿದೆ ಎಂದು ಐಡಿಎಫ್ (ಇಸ್ರೇಲ್ ಸೇನೆ) ತಿಳಿಸಿದೆ.