ಸ್ಯಾನ್ ಸಾಲ್ವಡೋರ್:ಎಲ್ ಸಾಲ್ವಡೋರ್ ದೇಶದ ರಾಜಧಾನಿ ಸ್ಯಾನ್ ಸಾಲ್ವಡೋರ್ನಲ್ಲಿರುವ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಗೇಟ್‌ಗಳನ್ನು ಮುಚ್ಚಿದ ನಂತರ ಸ್ಥಳೀಯ ತಂಡ ಅಲಿಯಾಂಜಾ ಮತ್ತು ಎಫ್‌ಎಎಸ್ ನಡುವಿನ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಕಾಲ್ತುಳಿತ ನಡೆದಿದೆ. ಈ ಘಟನೆಯಲ್ಲಿ 18 ವರ್ಷ ಮೇಲ್ಪಟ್ಟ 7 ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಬಿಬಿಸಿ ಸುದ್ದಿ ವಾಹಿನಿ ವರದಿ ಮಾಡಿದೆ.
ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ತುಣುಕಿನಲ್ಲಿ, ಅಭಿಮಾನಿಗಳು ಕ್ರೀಡಾಂಗಣದ ಪ್ರವೇಶದ್ವಾರದ ಮೇಲೆ ಬ್ಯಾರಿಕೇಡ್‌ಗಳನ್ನು ಎಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಎಲ್ ಸಾಲ್ವಡೋರ್ನ ಆರೋಗ್ಯ ಸಚಿವ ಫ್ರಾನ್ಸಿಸ್ಕೊ ಅಲಾಬಿ ಅವರು ಆ್ಯಂಬುಲೆನ್ಸ್‌ಗಳ ಮೂಲಕ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಹಲವು ಗಾಯಗೊಂಡಿದ್ದು, ಈ ಪೈಕಿ ಹಲವ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚಿತ್ತಿರೈ ಉತ್ಸವದಲ್ಲಿ ಕಾಲ್ತುಳಿತ: ಇತ್ತೀಚೆಗೆ ತಮಿಳುನಾಡಿನ ಮಧುರೈ ನಗರದ ಕಲ್ಲಜಗರ್ ದೇವರ ವೈಗೈ ನದಿಗೆ ಪ್ರವೇಶಿಸುವ ಚಿತಿರೈ ಉತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಐವರು ಸಾವನ್ನಪ್ಪಿದ್ದರು.