ಇಸ್ಲಾಮಾಬಾದ್(ಪಾಕಿಸ್ತಾನ): ಇಮ್ರಾನ್ ಖಾನ್ ಬಹುಮತ ಕಳೆದುಕೊಳ್ಳುತ್ತಿದ್ದಂತೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ವಿಪಕ್ಷ ಮೈತ್ರಿಕೂಟದ ಪ್ರಮುಖ ಹಾಗೂ ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರುವ ಅವರು, ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಬೇಕಾದರೆ ಕಾಶ್ಮೀರ ವಿವಾದ ಇತ್ಯರ್ಥವಾಗಬೇಕು ಎಂದಿದ್ದಾರೆ.
ಸಂಸತ್ನಲ್ಲಿ ಮಾತನಾಡಿರುವ ಅವರು, ಭಾರತದೊಂದಿಗೆ ನಾವು ಉತ್ತಮ ಸಂಬಂಧ ಬೆಳೆಸಲು ಬಯಸುತ್ತೇವೆ. ಆದರೆ, ಜಮ್ಮು-ಕಾಶ್ಮೀರದ ವಿವಾದ ಇತ್ಯರ್ಥವಾಗುವುದಕ್ಕೂ ಮುಂಚೆ ಅದು ಸಾಧ್ಯವಿಲ್ಲ ಎಂದಿದ್ದು, ಈ ವಿಚಾರವನ್ನ ನಾವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲು ಮುಂದಾಗುತ್ತೇವೆ ಎಂದಿದ್ದಾರೆ. ಈ ಮೂಲಕ ಪ್ರಧಾನಿ ಪಟ್ಟ ಅಲಂಕಾರ ಮಾಡುವುದಕ್ಕೂ ಮುಂಚಿತವಾಗಿ ಭಾರತದ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಸಾರ್ವಜನಿಕ ಭಾಷಣಗಳಲ್ಲಿ ವೇಳೆ ಅನೇಕ ಸಲ ಸಂಯಮ ಕಳೆದುಕೊಳ್ಳುವ ಇವರು, ಈ ಹಿಂದೆ ಕೂಡ ಅನೇಕ ಸಲ ಜಮ್ಮು-ಕಾಶ್ಮೀರದ ವಿಚಾರವಾಗಿ ಶೆಹಬಾಜ್ ಷರೀಫ್ ಮಾತನಾಡಿದ್ದಾರೆ ಎಂಬುದು ಗಮನಾರ್ಹ ಸಂಗತಿ.