ವಿಶ್ವಸಂಸ್ಥೆ:ಚೀನಾದಲ್ಲಿ ಪತ್ತೆಯಾಗಿ ಇಡೀ ವಿಶ್ವಕ್ಕೆ ಹಬ್ಬಿ ಸಾವು ನೋವಿಗೆ ಕಾರಣವಾದ ಕೊರೊನಾದ ಉಪತಳಿಗಳು ಪತ್ತೆಯಾಗುತ್ತಲೇ ಇವೆ. ಇದೀಗ ಒಮಿಕ್ರಾನ್ನ ಬಿಎ 2.75 ಎಂಬ ಉಪತಳಿ ಭಾರತದಲ್ಲಿ ಪತ್ತೆಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೇ ವಿಶ್ವದ ಇನ್ನೂ 10 ದೇಶಗಳಲ್ಲಿ ಈ ತಳಿ ಅಡಿ ಇಟ್ಟಿದೆ ಎಂದೂ ಮಾಹಿತಿ ನೀಡಿದೆ.
"ಕಳೆದೆರಡು ವಾರಗಳಲ್ಲಿ ಜಾಗತಿಕವಾಗಿ ಶೇ.30 ರಷ್ಟು ಕೊರೊನಾ ಪ್ರಕರಣಗಳು ಹೆಚ್ಚಿವೆ. ಭಾರತದಲ್ಲಿ ಕೊರೊನಾ ವೈರಸ್ ಒಮಿಕ್ರಾನ್ ತಳಿಯ ರೂಪಾಂತರವಾದ BA.2.75 ಉಪತಳಿ ಪತ್ತೆಯಾಗಿದೆ. ಅಲ್ಲದೇ ಈ ತಳಿ ಇನ್ನೂ 10 ದೇಶಗಳಲ್ಲಿ ಕಂಡುಬಂದಿದೆ" ಎಂದು ವಿಶ್ವಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
"ಯುರೋಪ್ ಮತ್ತು ಅಮೆರಿಕದಲ್ಲಿ BA.4 ಮತ್ತು BA.5 ಉಪತಳಿ ಕೊರೊನಾದ ಹೊಸ ಅಲೆ ಎಬ್ಬಿಸುತ್ತಿದೆ. ಭಾರತದಲ್ಲಿ ಪತ್ತೆಯಾದ BA.2.75 ನ ಹೊಸ ತಳಿಯ ಮೇಲೂ ನಿಗಾ ವಹಿಸಲಾಗಿದೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು" ಎಂದು ಅವರು ತಿಳಿಸಿದ್ದಾರೆ.
ವೈರಸ್ ಬಗ್ಗೆ ಹೆಚ್ಚಿನ ವಿಶ್ಲೇಷಣೆ:ಒಮಿಕ್ರಾನ್ ಉಪತಳಿ ಬಿಎ 2.75 ಬಗ್ಗೆ ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಕೂಡ ಟ್ವಿಟರ್ನಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾಹಿತಿ ನೀಡಿದ್ದು, "BA.2.75 ಎಂದು ಕರೆಯಲ್ಪಡುವ ಈ ಹೊಸ ತಳಿ ಭಾರತದಿಂದ ಮೊದಲು ವರದಿಯಾಗಿದೆ. ತದನಂತರ ಸುಮಾರು 10 ಇತರ ದೇಶಗಳಲ್ಲಿ ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಲಾಗಿದೆ" ಎಂದಿದ್ದಾರೆ.
"ಈ ವೈರಸ್ ತಳಿ ಮಾನವ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ. ಸ್ಪೈಕ್ ಪ್ರೋಟೀನ್, ಡೊಮೇನ್ನಲ್ಲಿ ರೂಪಾಂತರ ತಾಳಿದೆ. ಮಾನವನ ದೇಹದ ಮೇಲೆ ದಾಳಿ ಮಾಡುವ ಶಕ್ತಿ ಇದಕ್ಕಿದೆ. ಪ್ರತಿರಕ್ಷಣೆಯನ್ನು ಬೇಧಿಸುವ ಗುಣ ಈ ವೈರಸ್‌ಗೆ ಇದೆಯಾ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ" ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
"ನಾವು ಇನ್ನೂ ಸಾಂಕ್ರಾಮಿಕ ಕಾಲದಲ್ಲಿದ್ದೇವೆ. ವೈರಸ್‌ಗೆ ಇನ್ನೂ ಸಾಕಷ್ಟು ಬಲವಿದೆ. ಹಾಗಾಗಿ BA.4 ಅಥವಾ BA.5 ಅಥವಾ BA.2.75 ತಳಿಯನ್ನು ಉಪೇಕ್ಷಿಸದೇ ಜನರು ಮಾಸ್ಕ್ ಧರಿಸುವುದು, ಜನಸಂದಣಿಯನ್ನು ತಪ್ಪಿಸಬೇಕು" ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಒಂದು ಕೋಟಿಗೂ ಹೆಚ್ಚು ಆಸ್ಟ್ರಾಜೆನೆಕಾ ಲಸಿಕೆ ಡೋಸ್ ಹಾಳು ಮಾಡಿದ ಕೆನಡಾ