ಕರ್ನಾಟಕ

karnataka

ETV Bharat / international

ಪಪುವಾ ನ್ಯೂಗಿನಿ ಪ್ರಧಾನಿ, ಗವರ್ನರ್ ಜನರಲ್ ಜತೆ ಮೋದಿ ಮಾತುಕತೆ: ಬಾಂಧವ್ಯ ವೃದ್ಧಿಗೆ ಒತ್ತು

ಪ್ರಧಾನಿ ನರೇಂದ್ರ ಮೋದಿ ಅವರು ಪಪುವಾ ನ್ಯೂಗಿನಿ ಪ್ರಧಾನಿ ಮಾರಾಪೆ ಹಾಗೂ ಗವರ್ನರ್ ಜನರಲ್ ದಾಡೆ ಅವರೊಂದಿಗೆ ಮಾತುಕತೆ ನಡೆಸಿದರು.

Modi talks with PM Marape Governor General Dadae
ಪಪುವಾ ನ್ಯೂಗಿನಿ ಪ್ರಧಾನಿ, ಗವರ್ನರ್ ಜನರಲ್ ಜತೆ ಮೋದಿ ಮಾತುಕತೆ

By

Published : May 22, 2023, 9:46 AM IST

ಪೋರ್ಟ್ ಮೊರೆಸ್ಬಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯ ಪ್ರಧಾನಿ ಜೇಮ್ಸ್ ಮರಾಪೆ ಮತ್ತು ಗವರ್ನರ್ ಜನರಲ್ ಬಾಬ್ ದಾಡೆ ಅವರೊಂದಿಗೆ ಪ್ರತ್ಯೇಕವಾಗಿ ಮಹತ್ವದ ಮಾತುಕತೆ ನಡೆಸಿದರು. ಬಹು ವಲಯಗಳಲ್ಲಿ ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಬಗೆಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ರಾಷ್ಟ್ರಕ್ಕೆ ತಮ್ಮ ಚೊಚ್ಚಲ ಭೇಟಿಗಾಗಿ ಭಾನುವಾರ ಇಲ್ಲಿಗೆ ಆಗಮಿಸಿದ ಮೋದಿ, ದ್ವಿಪಕ್ಷೀಯ ಬಾಂಧವ್ಯ ಹೆಚ್ಚಿಸಲು ಭಾರತ ಮತ್ತು 14 ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ಪೋರ್ಟ್ ಮೊರೆಸ್ಬಿಯ ಎಲಾ ಬೀಚ್‌ನ ದಡದಲ್ಲಿರುವ ಐತಿಹಾಸಿಕ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಹೌಸ್‌ಗೆ ಆಗಮಿಸಿದರು. ಪಿಎಂ ಜೇಮ್ಸ್ ಮರಾಪೆ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಉಭಯ ನಾಯಕರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆ(ಎಫ್‌ಐಪಿಐಸಿ) 3 ನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಶೃಂಗಸಭೆ ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವಿನ ಚರ್ಚೆಗಳು ಬಹು ವಲಯಗಳಲ್ಲಿ ಪಾಲುದಾರಿಕೆಯನ್ನು ಬಲಪಡಿಸುವುದು, ಹವಾಮಾನ ಕ್ರಮ ಮತ್ತು ಜನರ ನಡುವಿನ ಸಂಬಂಧವನ್ನು ಉತ್ತೇಜಿಸುವುದು ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೇಮ್ಸ್ ಮರಾಪೆ ಅವರೊಂದಿಗೆ ಫಲಪ್ರದ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಪೋರ್ಟ್ ಮೊರೆಸ್ಬಿಯಲ್ಲಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ 3ನೇ ಶೃಂಗಸಭೆ ಆತಿಥ್ಯ ವಹಿಸಿದ್ದಕ್ಕಾಗಿ ಮಾರಾಪೆ ಅವರನ್ನು ಮೋದಿ ಅಭಿನಂದಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.

ಮಾರಾಪೆ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ ಮೋದಿ, "ಪ್ರಧಾನಿ ಜೇಮ್ಸ್ ಮರಾಪೆ ಮತ್ತು ನಾನು ಭಾರತ ಮತ್ತು ಪಪುವಾ ನ್ಯೂಗಿನಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡಿರುವ ಅತ್ಯಂತ ಫಲಪ್ರದ ಮಾತುಕತೆಗಳನ್ನು ನಡೆಸಿದ್ದೇವೆ. ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಐಟಿ ಕ್ಷೇತ್ರಗಳಾದ್ಯಂತ ಪಾಲುದಾರಿಕೆಯನ್ನು ಬಲಪಡಿಸುವ ಚರ್ಚೆಗಳು ಒಳಗೊಂಡಿವೆ. ಹವಾಮಾನ ಕ್ರಮ ಮತ್ತು ಜನರ ನಡುವಿನ ಸಂಬಂಧವನ್ನು ಉತ್ತೇಜಿಸುವ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ" ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

2014ರಲ್ಲಿ ಮೋದಿಯ ಪೋರ್ಟ್ ಮೊರೆಸ್ಬಿ ಭೇಟಿಯ ಸಂದರ್ಭದಲ್ಲಿ ಎಫ್‌ಐಪಿಐಸಿ ಅನ್ನು ಪ್ರಾರಂಭಿಸಲಾಯಿತು. ಈ ಪ್ರದೇಶದಲ್ಲಿ ಚೀನಾ ತನ್ನ ಮಿಲಿಟರಿ ಮತ್ತು ರಾಜತಾಂತ್ರಿಕ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡುತ್ತಿರುವ ಸಮಯದಲ್ಲಿ ಶೃಂಗಸಭೆ ನಡೆಯುತ್ತದೆ.

ಗವರ್ನರ್ ಜನರಲ್ ದಾಡೆ ಭೇಟಿ:ಇದಕ್ಕೂ ಮುನ್ನ ಮೋದಿ ಅವರು ಪಪುವಾ ನ್ಯೂಗಿನಿಯಾ ಗವರ್ನರ್ ಜನರಲ್ ಬಾಬ್ ದಾಡೆ ಅವರನ್ನು ಸರ್ಕಾರಿ ಭವನದಲ್ಲಿ ಭೇಟಿಯಾದರು. "ನರೇಂದ್ರ ಮೋದಿ ಅವರು ಐತಿಹಾಸಿಕ ಸರ್ಕಾರಿ ಭವನದಲ್ಲಿ ಗವರ್ನರ್-ಜನರಲ್ ಸರ್ ಬಾಬ್ ದಾಡೆ ಅವರೊಂದಿಗೆ ಆತ್ಮೀಯ ಸಂಭಾಷಣೆಯೊಂದಿಗೆ ಪಪುವಾ ನ್ಯೂಗಿನಿಯಾದಲ್ಲಿ ದಿನವನ್ನು ಪ್ರಾರಂಭಿಸಿದರು. ಭಾರತ-ಪಾಪುವಾ ನ್ಯೂಗಿನಿಯಾ ಸಂಬಂಧಗಳ ಮಹತ್ವ ಮತ್ತು ಉಭಯ ದೇಶಗಳ ನಡುವಿನ ಅಭಿವೃದ್ಧಿ ಪಾಲುದಾರಿಕೆ ಬಗ್ಗೆ ಚರ್ಚಿಸಿದರು" ಎಂದು ಎಂಇಎ ವಕ್ತಾರ ಬಾಗ್ಚಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕೂಡ ತಮ್ಮ ಅಧಿಕೃತ ಟ್ವಿಟರ್‌​​ನಲ್ಲಿ ಗವರ್ನರ್ ಜನರಲ್ ದಾಡೆ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. "ಪಪುವಾ ನ್ಯೂಗಿನಿಯಾದ ಗವರ್ನರ್-ಜನರಲ್ ಸರ್ ಬಾಬ್ ದಾಡೆ ಅವರೊಂದಿಗೆ ಅದ್ಭುತವಾದ ಸಭೆಯನ್ನು ನಡೆಸಿದ್ದೇವೆ. ನಾವು ವಿವಿಧ ಕ್ಷೇತ್ರಗಳಲ್ಲಿ ನಮ್ಮ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುವ ಮಾರ್ಗಗಳ ಬಗ್ಗೆ ಮಾತನಾಡಿದ್ದೇವೆ" ಎಂದು ಮೋದಿ ಹೇಳಿದರು.

ಜಿ7 ಮುಂದುವರಿದ ಆರ್ಥಿಕತೆಗಳ ಶೃಂಗಸಭೆಯಲ್ಲಿ ಭಾಗವಹಿಸಿದ ಭಾರತದ ಪ್ರಧಾನಿ ಅವರು ಜಪಾನ್‌ನಿಂದ ಭಾನುವಾರ ಸಂಜೆ ಇಲ್ಲಿಗೆ ಆಗಮಿಸಿದರು. ಅವರು ಹಲವಾರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಅವರ ಮೂರು ರಾಷ್ಟ್ರಗಳ ಪ್ರವಾಸದಲ್ಲಿ 2ನೇಯದಾಗಿ ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಪಪುವಾ ನ್ಯೂಗಿನಿಯಾ ಸೂರ್ಯಾಸ್ತದ ನಂತರ ಬರುವ ಯಾವುದೇ ನಾಯಕನಿಗೆ ವಿಧ್ಯುಕ್ತ ಸ್ವಾಗತವನ್ನು ನೀಡುವುದಿಲ್ಲ. ಆದರೆ ಪ್ರಧಾನಿ ಮೋದಿಗೆ ವಿಶೇಷ ವಿನಾಯಿತಿ ನೀಡಲಾಗಿದ್ದು, ಅವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು. ಎಫ್‌ಐಪಿಐಸಿ ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸುತ್ತಾರೆ.

ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆ(ಎಫ್‌ಐಪಿಐಸಿ) ಕುಕ್ ದ್ವೀಪಗಳು, ಫಿಜಿ, ಕಿರಿಬಾಟಿ, ಮಾರ್ಷಲ್ ದ್ವೀಪಗಳ ಗಣರಾಜ್ಯ, ಮೈಕ್ರೋನೇಷಿಯಾ, ನೌರು, ನಿಯು, ಪಲಾವ್, ಪಪುವಾ ನ್ಯೂ ಗಿನಿಯಾ, ಸಮೋವಾ, ಸೊಲೊಮನ್ ದ್ವೀಪಗಳು, ಟೊಂಗಾ, ಟುವಾಲು ಮತ್ತು ವನವಾಟುಗಳನ್ನು ಒಳಗೊಂಡಿದೆ.

ಇದನ್ನೂ ಓದಿ:ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ!- ವಿಡಿಯೋ

ABOUT THE AUTHOR

...view details