ಅಥೆನ್ಸ್ (ಗ್ರೀಕ್): ಗ್ರೀಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ನೀಡಿ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಗೌರವಿಸಿದ್ದಾರೆ. ಇದು ಗ್ರೀಕ್ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ಬ್ರಿಕ್ಸ್ ಶೃಂಗಸಭೆ ನಿಮಿತ್ತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಮೋದಿ ಅಲ್ಲಿಂದ ಶುಕ್ರವಾರ ಗ್ರೀಕ್ ರಾಜಧಾನಿ ಅಥೆನ್ಸ್ಗೆ ಬಂದಿಳಿದಿದ್ದಾರೆ. ಇದು ಮೋದಿ ಅವರ ಮೊದಲ ಗ್ರೀಕ್ ಪ್ರವಾಸವಾಗಿದೆ. ಅಲ್ಲದೇ, 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಆ ರಾಷ್ಟ್ರಕ್ಕೆ ನೀಡಿದ ಭೇಟಿ ಇದಾಗಿದೆ. 1983ರಲ್ಲಿ ಕೊನೆಯದಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭೇಟಿ ಕೊಟ್ಟಿದ್ದರು.
ಇಂದು ಅಥೆನ್ಸ್ಗೆ ಆಗಮಿಸಿದ ಮೋದಿ ಅವರು ಗ್ರೀಕ್ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಕುರಿತು ಚರ್ಚಿಸಿದರು. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ''ಅಥೆನ್ಸ್‌ನಲ್ಲಿ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ. ಭಾರತ-ಗ್ರೀಸ್ ಸ್ನೇಹವನ್ನು ಬಲಪಡಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸುವ ಮಾರ್ಗಗಳನ್ನೂ ನಾವು ಮಾತನಾಡಿದ್ದೇವೆ. ಚಂದ್ರಯಾನ-3ರ ಯಶಸ್ಸಿಗೆ ಗ್ರೀಕ್ ಅಧ್ಯಕ್ಷರು ಭಾರತವನ್ನು ಅಭಿನಂದಿಸಿದರು'' ಎಂದು ತಿಳಿಸಿದ್ದಾರೆ.