ವಾಷಿಂಗ್ಟನ್ ಡಿಸಿ (ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ದ್ವಿಪಕ್ಷೀಯ ಮಾತುಕತೆಗೂ ಮೊದಲು ನಾಗರಿಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಸಮಾನ ಮನಸ್ಕ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಆರ್ಟೆಮಿಸ್ ಒಪ್ಪಂದ (Artemis Accords)ಕ್ಕೆ ಸೇರಲು ಭಾರತ ನಿರ್ಧರಿಸಿದೆ. ಇದೇ ವೇಳೆ, 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಸಾ ಮತ್ತು ಇಸ್ರೋ ಜಂಟಿ ಕಾರ್ಯಾಚರಣೆಗೂ ಉಭಯ ದೇಶಗಳು ಒಪ್ಪಿಗೆ ನೀಡಿವೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಹಾಕಲಿದೆ. ಮನುಕುಲದ ಪ್ರಯೋಜನವೇ ಬಾಹ್ಯಾಕಾಶ ಸಂಶೋಧನೆಯ ಗುರಿಯಾಗಿದೆ. 1967ರ ಬಾಹ್ಯಾಕಾಶ ಒಪ್ಪಂದದ (Outer Space Treaty - OST) ಆಧಾರದಲ್ಲಿ ಆರ್ಟೆಮಿಸ್ ಒಪ್ಪಂದಗಳನ್ನು 21ನೇ ಶತಮಾನದಲ್ಲಿ ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆಗೆ ಮಾರ್ಗದರ್ಶನ ನೀಡಲು ರೂಪಿಸಲಾಗಿದೆ.
2025ರ ವೇಳೆಗೆ ಮತ್ತೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ಅಮೆರಿಕ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಂಗಳ ಮತ್ತು ಅದರಾಚೆಗೂ ಬಾಹ್ಯಾಕಾಶ ಪರಿಶೋಧನೆಯನ್ನು ವಿಸ್ತರಿಸುವ ಉದ್ದೇಶವೂ ಇದೆ. ನಾಸಾ ಮತ್ತು ಇಸ್ರೋ ಈ ವರ್ಷ ಮಾನವ ಬಾಹ್ಯಾಕಾಶಯಾನ ಸಹಕಾರ ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತಿವೆ. ಇದಲ್ಲದೇ, 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಂಟಿ ಕಾರ್ಯಾಚರಣೆಗೆ ನಾಸಾ ಮತ್ತು ಇಸ್ರೋ ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ.
ಮೈಕ್ರಾನ್ ಟೆಕ್ನಾಲಜಿಯಿಂದ 800 ಮಿಲಿಯನ್ ಡಾಲರ್ ಹೂಡಿಕೆ: ಸೆಮಿಕಂಡಕ್ಟರ್‌ಗಳಲ್ಲಿ ಪೂರೈಕೆ ಸರಪಳಿ ವೈವಿಧ್ಯೀಕರಣ ಉತ್ತೇಜಿಸುವ ಅರೆವಾಹಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅಮೆರಿಕ ಕಂಪನಿಗಳು ಭಾರತದೊಂದಿಗೆ ಪಾಲುದಾರಿಕೆ ಹೊಂದಿವೆ. ಭಾರತೀಯ ರಾಷ್ಟ್ರೀಯ ಸೆಮಿಕಂಡಕ್ಟರ್ ಮಿಷನ್‌ನ ಬೆಂಬಲದೊಂದಿಗೆ ಮೈಕ್ರಾನ್ ಟೆಕ್ನಾಲಜಿ 800 ಮಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಹೂಡಿಕೆಯನ್ನು ಘೋಷಿಸಿದೆ.
ಇದು ಭಾರತೀಯ ಅಧಿಕಾರಿಗಳಿಂದ ಹೆಚ್ಚುವರಿ ಹಣಕಾಸಿನ ಬೆಂಬಲದೊಂದಿಗೆ ಭಾರತದಲ್ಲಿ 2.75 ಬಿಲಿಯನ್ ಡಾಲರ್ ಸೆಮಿಕಂಡಕ್ಟರ್ ಘಟಕ ಮತ್ತು ಪರೀಕ್ಷಾ ಸೌಲಭ್ಯ ನೀಡುತ್ತದೆ. ಇದರ ಜೊತೆಗೆ ಅಮೆರಿಕ ಅಪ್ಲೈಡ್ ಮೆಟೀರಿಯಲ್ಸ್ ಭಾರತದಲ್ಲಿ ವಾಣಿಜ್ಯೀಕರಣ ಮತ್ತು ನಾವೀನ್ಯತೆಗಾಗಿ ಹೊಸ ಸೆಮಿಕಂಡಕ್ಟರ್ ಸೆಂಟರ್ ಅನ್ನು ಘೋಷಿಸಿದೆ. ಲ್ಯಾಂಬ್ ರಿಸರ್ಚ್ ಮತ್ತೊಂದು ಸೆಮಿಕಂಡಕ್ಟರ್ ಉತ್ಪಾದನಾ ಸಲಕರಣೆ ಕಂಪನಿಯು 60 ಸಾವಿರ ಭಾರತೀಯ ಇಂಜಿನಿಯರ್‌ಗಳಿಗೆ ಸೆಮಿವರ್ಸ್ ಪರಿಹಾರದ ಮೂಲಕ ಭಾರತದ ಸೆಮಿಕಂಡಕ್ಟರ್ ವರ್ಕ್‌ಫೋರ್ಸ್ ಅಭಿವೃದ್ಧಿ ಗುರಿಗಳನ್ನು ವೇಗಗೊಳಿಸಲು ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ.