ಮಾಸ್ಕೋ (ರಷ್ಯಾ):ಸೋವಿಯತ್ ಒಕ್ಕೂಟದ ಕೊನೆಯ, ಶೀತಲ ಸಮರ ಕೊನೆಗೊಳಿಸಿದ ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ತಮ್ಮ 91 ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾದರು. ಗೋರ್ಬಚೇವ್ ಅವರು ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಇಹಲೋಕ ತ್ಯಜಿಸಿದರು.
ಮಿಖಾಯಿಲ್ ಗೋರ್ಬಚೇವ್ ಅವರು ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದ (ಯುಎಸ್ಎಸ್ಆರ್) ಕೊನೆಯ ಅಧ್ಯಕ್ಷರಾಗಿದ್ದರು. ಯುಎಸ್ಎಸ್ಆರ್ ವಿಭಜನೆಗೊಂಡು 1991 ರ ದಂಗೆಯ ನಂತರ ಅವರು ಅಧಿಕಾರ ಕಳೆದುಕೊಂಡರು. ನಾಗರಿಕರಿಗೆ ಸ್ವಾತಂತ್ರ್ಯವನ್ನು ನೀಡುವ ಮೂಲಕ ಪ್ರಜಾಸತ್ತಾತ್ಮಕ ತತ್ವಗಳ ಸಾಲಿನಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ನಡೆಸಿದ ವ್ಯಕ್ತಿಯಾಗಿದ್ದಾರೆ. 1985 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ಈ ಹಿಂದಿನ ಅಧ್ಯಕ್ಷರು ಮೊಟಕುಗೊಳಿಸಿದ್ದ ವಾಕ್ ಸ್ವಾತಂತ್ರ್ಯದ ನೀತಿಯನ್ನು ಸುಧಾರಿಸಿದರು.
ಗೋರ್ಬಚೇವ್ ಅವರು ಪೆರೆಸ್ಟ್ರೋಯಿಕಾ ಅಥವಾ ಪುನರ್ರಚನೆ ಎಂಬ ಆರ್ಥಿಕ ಸುಧಾರಣೆಯ ಕಾರ್ಯಕ್ರಮ ಪ್ರಾರಂಭಿಸಿ, ಸೋವಿಯತ್ ಆರ್ಥಿಕತೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದರು. ಪತ್ರಿಕಾ ಸ್ವಾತಂತ್ರ್ಯ ಮತ್ತು ಕಲೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಿಖಾಯಿಲ್ ಗೋರ್ಬಚೆವ್ ಅವರು ಅಮೆರಿಕದ ಜೊತೆಗೆ ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ ಮಾಡಿಕೊಂಡರು. ಇದು ಅವರನ್ನು ಹೆಚ್ಚು ಗುರುತಿಸುವಂತೆ ಮಾಡಿತು. ಇದು ಅವರಿಗೆ 1990 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನೂ ತಂದುಕೊಟ್ಟಿತು.