ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ವಿವಿಧ ನಗರಗಳಲ್ಲಿನ ಸರ್ಕಾರಿ ಮತ್ತು ಮಿಲಿಟರಿ ಕಟ್ಟಡಗಳ ಮೇಲೆ ಮೇ 9 ರಂದು ನಡೆದ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಇಮ್ರಾನ್ರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವ ಬಗ್ಗೆ ಆಂತರಿಕ ಸಚಿವ ರಾಣಾ ಸನಾವುಲ್ಲಾ ಈ ಹಿಂದೆಯೇ ಸುಳಿವು ನೀಡಿದ್ದರು ಎಂಬುದು ಗಮನಾರ್ಹ.
ಮುಂದಿನ ದಿನಗಳಲ್ಲಿ ಇಮ್ರಾನ್ ಖಾನ್ ಮೇ 9ರ ಹಿಂಸಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಪುರಾವೆಗಳು ಕಂಡು ಬಂದರೆ ಮಾಜಿ ಪ್ರಧಾನಿಯನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಆದರೆ ಅಂದಿನ ಘಟನೆಯಲ್ಲಿ ಅವರು ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಾಕ್ ರಕ್ಷಣಾ ಸಚಿವರು ಮಾಧ್ಯಮಗಳಿಗೆ ತಿಳಿಸಿದರು.
ಖಾನ್ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಂಡಿತವಾಗಿಯೂ ಮಾಡಬಹುದು. ಮಿಲಿಟರಿ ಕಟ್ಟಡಗಳ ಮೇಲೆ ದಾಳಿ ಮಾಡಲು ಅವರು ಯೋಜನೆ ರೂಪಿಸಿದ್ದಾರೆ ಮತ್ತು ಅದನ್ನು ಕಾರ್ಯಗತಗೊಳಿಸಿದ್ದಾರೆ. ನನ್ನ ತಿಳುವಳಿಕೆಯ ಪ್ರಕಾರ ಇದು ಸಂಪೂರ್ಣವಾಗಿ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಪ್ರಕರಣವಾಗಿದೆ ಎಂದರು. ಮೇ 9ರ ಗಲಭೆಗೆ ಖಾನ್ ವೈಯಕ್ತಿಕವಾಗಿ ಸಂಚು ರೂಪಿಸಿದ್ದಾರೆ ಎಂದು ಸಚಿವರು ಆರೋಪಿಸಿದರು.