ನ್ಯೂಯಾರ್ಕ್(ಅಮೆರಿಕ):ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದ ಅಮೆರಿಕನ್ನರಿಗೆ ಪ್ರಕೃತಿ ಬಲವಾದ ಪೆಟ್ಟು ನೀಡಿದೆ. ದೇಶಕ್ಕೆ ಬಾಂಬ್ ಸೈಕ್ಲೋನ್ ಅಪ್ಪಳಿಸಿದ್ದು, ವಿಪರೀತ ಚಳಿ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ದೇಶಾದ್ಯಂತ ರಜಾಕೂಟಗಳು, ಸಂಚಾರ, ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.
ಅಮೆರಿಕದ 51 ರಾಜ್ಯಗಳೂ ಚಳಿಗೀಡಾಗಿದ್ದು, ಹವಾಮಾನ ಇಲಾಖೆ ಹಿಮಪಾತದ ಮುನ್ನೆಚ್ಚರಿಕೆ ನೀಡಿದೆ. 20 ಕೋಟಿ ಜನರು ಇದರಿಂದ ಬಾಧಿತರಾಗಲಿದ್ದು, ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೊರಗೆ ಬಂದ್ರೆ ಫ್ರಾಸ್ಟ್ಬೈಟ್:ದೇಶದಲ್ಲಿ ಚಳಿ ಎಷ್ಟರಮಟ್ಟಿಗೆ ಇದೆ ಅಂದ್ರೆ ಅಪ್ಪಿತಪ್ಪಿ ಹೊರಗೆ ಬಂದರೆ 5 ನಿಮಿಷದಲ್ಲೇ ಫ್ರಾಸ್ಟ್ಬೈಟ್ (ವಿಪರೀತ ಚಳಿಯಿಂದಾಗುವ ಗಾಯ) ಆಗುವ ಸಾಧ್ಯತೆ ಇದೆ. ಇದರಿಂದ ಜನರು ಸಾಧ್ಯವಾದಷ್ಟು ಮನೆಯಲ್ಲಿ ಬೆಚ್ಚಗಿನ ವಾತಾವರಣದಲ್ಲಿ ಕಳೆಯಲು ಅಲ್ಲಿನ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಹಲವು ಪ್ರದೇಶಗಳಲ್ಲಿ 20 ಸೆ.ಮೀಟರ್ಗಿಂತ ಹೆಚ್ಚು ಹಿಮಪಾತವಾಗಿದೆ. ಇದರಿಂದಾಗಿ ಉಷ್ಣಾಂಶ ಇಳಿಕೆಯಾಗಿದೆ. ವಿಮಾನ, ರೈಲು ಸಂಚಾರದ ಜೊತೆಗೆ ರಸ್ತೆ ಸಂಚಾರವೂ ಸ್ಥಬ್ಧವಾಗಿದೆ. ಪ್ರಕೃತಿ ವಿಕೋಪಕ್ಕೀಡಾದ ಹಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
-60 ಡಿಗ್ರಿಗೆ ತಾಪಮಾನ ಇಳಿಕೆ!:ಹಿಮಪಾತ, ಸುಳಿಗಾಳಿಯಿಂದಾಗಿ ಅಮೆರಿಕದಲ್ಲಿ ತಾಪಮಾನ -60 ಡಿಗ್ರಿಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ಮಂಗಳ ಗ್ರಹಕ್ಕಿಂತಲೂ(-80 ಡಿಗ್ರಿ ಸೆಲ್ಸಿಯಸ್) ತುಸು ಕಡಿಮೆ. ಇದು ಒಂದು ತಲೆಮಾರಿನಲ್ಲಿ ಒಮ್ಮೆ ಆಗುವ ಪ್ರಕೃತಿ ವೈಪರೀತ್ಯವಾಗಿದ್ದು, ಈ ಬಾರಿ ಅಮೆರಿಕಕ್ಕೆ ಬಂದೊದಗಿದೆ.
ವಿಮಾನ ಸಂಚಾರ ಬಂದ್:ಚಳಿ ಮತ್ತು ಸುಳಿಗಾಳಿಯಿಂದಾಗಿ ಅಮೆರಿಕದಲ್ಲಿ 4500 ಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 22 ಸಾವಿರಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ದಟ್ಟ ಮಂಜು ಮುಸುಕಿದ್ದು, ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದಾಗ್ಯೂ ಹಲವು ಪ್ರದೇಶಗಳಲ್ಲಿ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾಗಿ ವರದಿಯಾಗಿದೆ.
ತಾಪಮಾನ ಕೇಂದ್ರಗಳಲ್ಲಿ ಜನರು:ಇನ್ನು ಅತ್ಯುಗ್ರ ಚಳಿಯಿಂದಾಗಿ ವೃದ್ಧರು ಮತ್ತು ಮಕ್ಕಳನ್ನು ಬಾಧಿಸುತ್ತಿದ್ದು, ರಕ್ಷಣೆಗಾಗಿ ಅಲ್ಲಿನ ಸರ್ಕಾರಗಳು ತಾಪಮಾನ ಕೇಂದ್ರಗಳನ್ನು (ಡೆಟ್ರಾಯಿಟ್)ಆರಂಭಿಸಿದೆ. ಜನರನ್ನು ಚಳಿಯಿಂದ ರಕ್ಷಿಸಲು ಕಾರ್ಯಕರ್ತರು ಹರಸಾಹಸ ಪಡುತ್ತಿದ್ದು, ವಯೋವೃದ್ಧರು ಮತ್ತು ಮಕ್ಕಳು ಡೆಟ್ರಾಯಿಟ್‌ನಲ್ಲಿ ಆಶ್ರಯ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಆನ್ಲೈನ್ ಮೂಲಕ ಪಾಠ ಪ್ರವಚನ ನಡೆಸಲಾಗುತ್ತಿದೆ.
ಓದಿ:ಅಮೆರಿಕ ಉನ್ನತ ರಾಜತಾಂತ್ರಿಕ ಸ್ಥಾನಕ್ಕೆ ಭಾರತೀಯ ಅಮೆರಿಕನ್ ರಿಚರ್ಡ್ ವರ್ಮಾ ನಾಮ ನಿರ್ದೇಶನ