ಕ್ವೆಟ್ಟಾ (ಬಲೂಚಿಸ್ತಾನ್) : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು, 100 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಾವು ನೋವು ಉಂಟಾಗಿರುವುದನ್ನು ದೃಢಪಡಿಸಿದ ಮಸ್ತುಂಗ್ ಸಹಾಯಕ ಆಯುಕ್ತ ಅತ್ತಾಹುಲ್ ಮುನೀಮ್, ಈದ್ ಮಿಲಾದ್-ಉನ್-ನಬಿಯ ಮೆರವಣಿಗೆಗಾಗಿ ಭಕ್ತರು ಒಟ್ಟುಗೂಡುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಮಸ್ತುಂಗ್ ಜಿಲ್ಲೆಯಲ್ಲಿ ನಡೆದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಶುಕ್ರವಾರದ ಸ್ಫೋಟ ಸಂಭವಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜಿಲ್ಲಾಡಳಿತದ ಪ್ರಕಾರ, ಮಸ್ತಂಗ್ನ ಡಿಎಸ್ಪಿ ನವಾಜ್ ಗಶಕೋರಿ ಕೂಡ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಈ ಘಟನೆಗೆ ತಾನು ಕಾರಣವಲ್ಲ ಎಂದು ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಹೇಳಿದೆ. ಇಂದು ಸಂಭವಿಸಿದ ಸ್ಫೋಟ ಭಾರಿ ಪ್ರಮಾಣದ್ದಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಸಿಂಧ್ ಹಂಗಾಮಿ ಮುಖ್ಯಮಂತ್ರಿ ಮಕ್ಬೂಲ್ ಬಕರ್ ಸ್ಫೋಟವನ್ನು ಖಂಡಿಸಿದ್ದಾರೆ. ಮುಗ್ಧ ಜನರ ಜೀವ ಬಲಿ ತೆಗೆದುಕೊಳ್ಳುವವರು ಮಾನವೀಯತೆಯ ಶತ್ರುಗಳು ಎಂದು ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.