ಕಠ್ಮಂಡು, ನೇಪಾಳ:ಎರಡು ಪ್ರತ್ಯೇಕ ಅಪಘಾತದಲ್ಲಿ 12 ಜನ ಮೃತಪಟ್ಟಿದ್ದು, ಅನೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ಮಕವಾನ್‌ಪುರದಲ್ಲಿ ನೆಲಕ್ಕುರುಳಿದ ಮಿನಿ ಬಸ್: ಮಿನಿ ಬಸ್ ಪಲ್ಟಿಯಾಗಿ ಏಳು ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಗುರುವಾರ ಬಾಗ್ಮತಿ ಪ್ರಾಂತ್ಯದ ಮಕವಾನ್‌ಪುರದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಕಠ್ಮಂಡುವಿನಿಂದ ಬಿರ್‌ಗುಂಜ್‌ಗೆ ಹೋಗುತ್ತಿದ್ದ ಬಸ್‌ನ ನಿಯಂತ್ರಣ ತಪ್ಪಿ ಮಕವಾನ್‌ಪುರದಲ್ಲಿ ಪಲ್ಟಿಯಾಗಿದೆ. ಈ ಅವಘಡದಲ್ಲಿ ಬಸ್ಸಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಕ್ಯಂಗಾಸಿಬಗರ್ನಲ್ಲಿ ಬಸ್ ಪಲ್ಟಿ: ಪಶ್ಚಿಮ ನೇಪಾಳದ ಕ್ಯಂಗಾಸಿಬಗರ್ನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಠ್ಮಂಡುವಿನಿಂದ ರುಕುಮ್‌ಕೋಟ್‌ಗೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ 13 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಗಾಯಾಳುಗಳನ್ನು ರುಕುಂಪುರ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಎರಡು ಪ್ರತ್ಯೇಕ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಓದಿ:ಭೀಕರ ರಸ್ತೆ ಅಪಘಾತ ಪೊಲೀಸ್ ಸೇರಿ ಮೂವರ ಸಾವು.. ಹಲವರಿಗೆ ಗಾಯ