ಕರ್ನಾಟಕ

karnataka

ETV Bharat / international

ಮಿಲಿಟರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಪುತ್ರಿ; ಉತ್ತರಾಧಿಕಾರಿಯಾಗಲಿದ್ದಾರಾ 11 ವರ್ಷದ ಜು-ಎ? - ಕಿಮ್ ಅವರ ಮಗಳು

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಪುತ್ರಿ ಜು-ಎ ಮಿಲಿಟರಿ ಸಂಬಂಧಿತ ಕಾರ್ಯಕ್ರಮಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಹಲವಾರು ಚರ್ಚೆಗಳನ್ನು ಹುಟ್ಟು ಹಾಕಿದೆ.

Kim Jong-un likely flaunting daughter
Kim Jong-un likely flaunting daughter

By ETV Bharat Karnataka Team

Published : Sep 5, 2023, 4:01 PM IST

ಸಿಯೋಲ್ : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅವರು ಮಿಲಿಟರಿ ಕ್ಷೇತ್ರದಲ್ಲಿ ತಮ್ಮ ಸಾಧನೆಗಳನ್ನು ಎತ್ತಿ ತೋರಿಸಲು ಮತ್ತು ಮುಖ್ಯವಾಗಿ ಸಶಸ್ತ್ರ ಪಡೆಗಳ ನಿಷ್ಠೆಯು ತನ್ನ ಪರವಾಗಿ ಇರುವಂತೆ ನೋಡಿಕೊಳ್ಳಲು ಮಗಳು ಜು-ಎಯನ್ನು ಮಿಲಿಟರಿ ಸಂಬಂಧಿತ ಕಾರ್ಯಕ್ರಮಗಳಿಗೆ ಕರೆತರುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ (South Korea's Unification Ministry) ಮಂಗಳವಾರ ತಿಳಿಸಿದೆ.

ಕಿಮ್ ಅವರ ಮಗಳು 2022 ರ ನವೆಂಬರ್​ನಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡ ನಂತರ 15 ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟು 12 ಸಂದರ್ಭಗಳು ಅಥವಾ ಶೇಕಡಾ 80 ರಷ್ಟು ಮಿಲಿಟರಿ ಸಂಬಂಧಿತ ಘಟನೆಗಳಲ್ಲಿಯೇ ಮಗಳು ಕಾಣಿಸಿಕೊಂಡಿದ್ದು ಗಮನಾರ್ಹವಾಗಿದೆ ಎಂದು ಉತ್ತರ ಕೊರಿಯಾದ ಮುಂಚೂಣಿ ಪತ್ರಿಕೆ ರೊಡಾಂಗ್ ಸಿನ್ಮುನ್ ವರದಿಗಳನ್ನು ಉಲ್ಲೇಖಿಸಿ ಸಚಿವಾಲಯ ತಿಳಿಸಿದೆ.

ಹಾಗೆಯೇ ಜು-ಎ ಅವರು ಮೂರು ಬಾರಿ ಆರ್ಥಿಕತೆ ಮತ್ತು ಸಾಮಾಜಿಕ ವ್ಯವಹಾರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುಮಾರು 11 ವರ್ಷ ವಯಸ್ಸಿನ ಜು-ಎ, ನವೆಂಬರ್ 18, 2022 ರಂದು ತನ್ನ ತಂದೆಯೊಂದಿಗೆ ಹ್ವಾಸೊಂಗ್ -17 ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.

ಅಂದಿನಿಂದ ಜು-ಎ ಅವರ ಸಾರ್ವಜನಿಕ ಭಾಗವಹಿಸುವಿಕೆಗಳು ಮಿಲಿಟರಿ ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿವೆ. ಫೆಬ್ರವರಿಯಲ್ಲಿ ನಡೆದ ಮಿಲಿಟರಿ ಪರೇಡ್ ಮತ್ತು ಮೇ ತಿಂಗಳಲ್ಲಿ ಬೇಹುಗಾರಿಕೆ ಉಪಗ್ರಹ ನಿರ್ಮಾಣ ಕೇಂದ್ರದ ತಪಾಸಣೆಯಲ್ಲಿ ಜು-ಎ ಕಾಣಿಸಿಕೊಂಡಿದ್ದರು. ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಆಕೆಯನ್ನು ಒಳಗೊಂಡ ಒಟ್ಟು 107 ಫೋಟೋಗಳನ್ನು ಪ್ರಸಾರ ಮಾಡಿವೆ.

ಅವುಗಳಲ್ಲಿ, ಏಳು ಫೋಟೋಗಳನ್ನು ರೊಡಾಂಗ್ ಸಿನ್ಮುನ್ ಪ್ರತಿಕೆಯ ಮುಖಪುಟದಲ್ಲಿ ಪ್ರಕಟಿಸಲಾಗಿದೆ. 107 ಫೋಟೊಗಳ ಪೈಕಿ 80 ಫೋಟೋಗಳಲ್ಲಿ ತಂದೆ - ಮಗಳು ಅಕ್ಕ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ಕಾರಿ ಮಾಧ್ಯಮಗಳಲ್ಲಿ ಪುತ್ರಿ ಜು-ಎ ಪದೇ ಪದೆ ಕಾಣಿಸಿಕೊಳ್ಳುತ್ತಿದ್ದರೂ, ದೇಶದ ಪಿತೃಪ್ರಧಾನ ಸಮಾಜ ಮತ್ತು ಕಿಮ್ ಅವರ ಮಕ್ಕಳಲ್ಲಿ ಹಿರಿಯ ಮಗನ ಅಸ್ತಿತ್ವವನ್ನು ಗಮನಿಸಿದರೆ, ಜು-ಎ ಆನುವಂಶಿಕ ಉತ್ತರಾಧಿಕಾರಿಯಾಗುವ ಸಾಧ್ಯತೆ ಕಡಿಮೆ ಎಂಬುದು ಉತ್ತರ ಕೊರಿಯಾದ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಪುರುಷ ಪ್ರಾಬಲ್ಯದ ಸಮಾಜ ವ್ಯವಸ್ಥೆ ಹೊಂದಿರುವ ಉತ್ತರ ಕೊರಿಯಾದಲ್ಲಿ ಕಿಮ್ ಅವರ ರಾಜಮನೆತನದ ಪೇಕ್ಟು ಸಂತತಿಯ ಬಗ್ಗೆ ಜನ ನಿಷ್ಠೆ ಹೊಂದಿದ್ದಾರೆ. ಆದರೆ ಅದೇ ಕಾರಣಕ್ಕೆ ಜು-ಎ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗುತ್ತದೆ ಎಂದು ನಿರೀಕ್ಷಿಸುವುದು ಅವಸರದ ನಿರ್ಣಯವಾಗುತ್ತದೆ ಎಂದು ದಕ್ಷಿಣ ಕೊರಿಯಾದ ಗೂಢಚಾರ ಸಂಸ್ಥೆ ಸೋಮವಾರ ತಿಳಿಸಿದೆ. ಕಿಮ್ ಜಾಂಗ್-ಉನ್ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ (ಡಬ್ಲ್ಯುಪಿಕೆ) ಅಧ್ಯಕ್ಷ ಮತ್ತು ಸಾಮಾನ್ಯವಾಗಿ ಉತ್ತರ ಕೊರಿಯಾ ಎಂದು ಕರೆಯಲ್ಪಡುವ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಡಿಪಿಆರ್​ಕೆ) ನ ಸರ್ವೋಚ್ಚ ನಾಯಕರಾಗಿದ್ದಾರೆ.

ಇದನ್ನೂ ಓದಿ : ಸ್ಫೋಟಕ ಸಾಗಣೆ ಯತ್ನ; ಗಾಝಾ ಪಟ್ಟಿಯಿಂದ ರಫ್ತುಗಳಿಗೆ ನಿರ್ಬಂಧ ಹೇರಿದ ಇಸ್ರೇಲ್

ABOUT THE AUTHOR

...view details