ಖಾನ್ ಯೂನಿಸ್: ಹಮಾಸ್ ಉಗ್ರ ಸಂಘಟನೆ ನಿರ್ನಾಮಕ್ಕೆ ಶಪಥ ಮಾಡಿರುವ ಇಸ್ರೇಲ್ ಸೇನೆ ಸೋಮವಾರ ಗಾಜಾ ಪಟ್ಟಿಯಲ್ಲಿ ತೀವ್ರ ದಾಳಿ ನಡೆಸಿದ್ದು, ಹಮಾಸ್ ಉಗ್ರಗಾಮಿಗಳ ಸೆರೆಯಲ್ಲಿದ್ದ ಮಹಿಳಾ ಸೈನಿಕರೊಬ್ಬರನ್ನು ಸೆರೆಯಿಂದ ಬಿಡುಗಡೆ ಮಾಡಿಸಿದೆ. ಇದರ ಮಧ್ಯೆ ಗಾಯಗೊಂಡವರು ಹಾಗೂ ಸಾವಿರಾರು ಪ್ಯಾಲೆಸ್ಟೈನಿಯರು ಆಶ್ರಯ ಪಡೆದಿರುವ ಆಸ್ಪತ್ರೆಗಳ ಬಳಿಯೇ ವೈಮಾನಿಕ ದಾಳಿಗಳು ನಡೆದಾಗಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮದ ಕರೆಯನ್ನು ತಿರಸ್ಕರಿಸಿದ್ದಾರೆ.
ಕದನ ವಿರಾಮಕ್ಕೆ ಕರೆ ಕೊಡುವುದೆಂದರೆ ಅದು ಹಮಾಸ್ಗೆ ಇಸ್ರೇಲ್ ಶರಣಾಗಲು ಕರೆ ನೀಡಿದಂತೆಯೇ. ಅದು ನಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ. ಈಗಾಗಲೇ ಉತ್ತರ ಗಾಜಾದಲ್ಲಿ ಹಮಾಸ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದ್ದು, ಹಮಾಸ್ ಜೊತೆಗಿನ ಇಸ್ರೇಲ್ ಯುದ್ಧ 2ನೇ ಹಂತಕ್ಕೆ ತಲುಪಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ಕ್ರೂರ ದಾಳಿ ವೇಲೆ ಸರೆಹಿಡಿಯಾಗಿದ್ದ ಮಹಿಳಾ ಸೈನಿಕಳನ್ನು ಯುದ್ಧ ಪ್ರಾರಂಭವಾಗಿ ಒಂದು ವಾರಗಳ ನಂತರ ಇದು ಮೊದಲ ಬಾರಿಗೆ ರಕ್ಷಿಸಲಾಗಿದೆ ಎಂದು ಮಿಲಿಟರಿ ಹೇಳಿದೆ. ಯೋಧೆ ಒರಿ ಮೆಗಿದಿಶ್ ಆರೋಗ್ಯವಾಗಿದ್ದು, ತನ್ನ ಕುಟುಂಬವನ್ನು ಭೇಟಿಯಾಗಿದ್ದಾಳೆ. ಜೊತೆಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಆಕೆಯನ್ನು ಅವರ ಮನೆಗೆ ಆಹ್ವಾನಿಸಿದ್ದಾರೆ. ಸದ್ಯ ಯುದ್ಧದಲ್ಲಿ ಹಮಾಸ್ ಒತ್ತೆಯಾಳುಗಳಾಗಿರುವವರನ್ನು ಮುಕ್ತಗೊಳಿಸುವುದು ಭದ್ರತಾ ಪಡೆಗಳ ಮುಖ್ಯ ಗುರಿ ಎಂದು ತಿಳಿಸಿದೆ.