ಬೀಟ್ ಹನೂನ್ (ಗಾಜಾ ಪಟ್ಟಿ): ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿಯ ನಂತರ ಇಸ್ರೇಲ್ ವೈಮಾನಿಕ ದಾಳಿಗೂ ಮೊದಲು ಮತ್ತು ನಂತರ ತೆಗೆದ ಉಪಗ್ರಹದ ಚಿತ್ರಗಳಲ್ಲಿ ಉತ್ತರ ಗಾಜಾದ ಪ್ರದೇಶಗಳ ನಾಶದ ಬಾಹ್ಯಾಕಾಶದ ನೋಟಗಳು ಸೆರೆಯಾಗಿವೆ. ಇದರಲ್ಲಿ ಅಪಾರ್ಟ್‌ಮೆಂಟ್ ಕಟ್ಟಡಗಳು ಕುಸಿದು ಭೂಪ್ರದೇಶವು ಮೂನ್‌ಸ್ಕೇಪ್ ನಂತಾಗಿರುವ ದೃಶ್ಯಗಳು ಕಂಡು ಬಂದಿವೆ.
ಮ್ಯಾಕ್ಸರ್ ಟೆಕ್ನಾಲಜೀಸ್ ಶನಿವಾರ ತೆಗೆದ ಚಿತ್ರಗಳಲ್ಲಿ, ಇಜ್ಬಾತ್ ಬೀಟ್ ಹನೂನ್ ನೆರೆಹೊರೆಯಲ್ಲಿನ ನಾಲ್ಕು ಮತ್ತು ಐದು ಅಂತಸ್ತಿನ ಕಟ್ಟಡಗಳು ಕುಸಿತದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕೆಲವು ಬೃಹತ್ ಕಟ್ಟಡಗಳು ಧರೆಗುರುಳಿವೆ. ಹಲವು ಕಟ್ಟಡಗಳು ಅರ್ಧದಷ್ಟು ಹಾನಿಯಾಗಿವೆ ಮತ್ತು ಎರಡು ಬೃಹತ್ ಕಟ್ಟಡ ಸಂಕೀರ್ಣಗಳು ಕಲ್ಲು, ಮಣ್ಣಿನ ರಾಶಿಯಂತೆ ಬಿದ್ದಿವೆ. ಅಲ್ ಕರಾಮೆಹ್ ನೆರೆಹೊರೆಯಲ್ಲಿನ ವಿನಾಶವನ್ನು ಉಪಗ್ರಹ ಚಿತ್ರದ ಬೂದಿ ಬಣ್ಣದ ಭಾಗದಿಂದ ನೋಡಬಹುದು.
ಬೀಟ್ ಹನೂನ್ನ ಬೀದಿಗಳು ದಾಳಿಯಿಂದ ನಲುಗಿ ಹೋಗಿವೆ. ಇಸ್ರೇಲ್‌ನಲ್ಲಿ 1,400 ಜನರನ್ನು ಕೊಂದು 200 ಜನರನ್ನು ಒತ್ತೆಯಾಳುಗಳನ್ನಾಗಿಸಿಕೊಂಡ ಗಡಿಯಾಚೆಗಿನ ದಾಳಿಯ ನಂತರ ಅಕ್ಟೋಬರ್ 7 ರಂದು ಯುದ್ಧವು ಆರಂಭವಾಯಿತು. ಬಳಿಕ ಇಸ್ರೇಲ್ ಸಾವಿರಾರು ವೈಮಾನಿಕ ದಾಳಿಗಳನ್ನು ನಡೆಸಿತ್ತು. ಈ ಭೀಕರ ದಾಳಿಯಿಂದ ಗಾಜಾದಲ್ಲಿ 7,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.