ಟೆಲ್ ಅವೀವ್(ಇಸ್ರೇಲ್):ಇಸ್ರೇಲ್ ಮೇಲೆ ವೈಮಾನಿಕ ದಾಳಿ ನಡೆಸಿ ನೂರಾರು ಜನರ ಸಾವಿಗೆ ಕಾರಣವಾದ ಹಮಾಸ್ಗೆ ಇಸ್ರೇಲ್ ಖಡಕ್ ಎಚ್ಚರಿಕೆ ನೀಡಿದೆ.ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು ಹಮಾಸ್ಗೆ , "ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಿಲ್ಲವಾದರೂ ಈ ಯುದ್ಧವನ್ನು ಮುಗಿಸುತ್ತದೆ" ಎಂದು ಗುಡುಗಿದ್ದಾರೆ.
ಈ ಹೇಳಿಕೆ ಬೆನ್ನಲ್ಲೇ ಹಮಾಸ್ನ ಏಟಿಗೆ ಎದಿರೇಟು ನೀಡಲು ಇಸ್ರೇಲ್ ಬರೋಬ್ಬರಿ 3,00,000 ಸೈನಿಕರನ್ನು ಒಳಗೊಂಡ ತುಕಡಿ ಸಿದ್ದಗೊಳಿಸಿದೆ. ಇಸ್ರೇಲ್ನ್ ಈ ಸಿದ್ಧತೆ 1973 ರ ಯೋಮ್ ಕಿಪ್ಪೂರ್ ಯುದ್ಧದ ನಂತರದ ಅತಿ ದೊಡ್ಡ ಸಜ್ಜುಗೊಳಿಸುವಿಕೆಯಾಗಿದೆ. "ಇಸ್ರೇಲ್ ಈಗ ಯುದ್ಧದಲ್ಲಿದೆ. ಆದರೆ, ನಾವಾಗಿಯೇ ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ನಡೆಸಲಾಗಿದೆ. ಆದರೆ ಇಸ್ರೇಲ್ ಈ ಯುದ್ಧಕ್ಕೆ ಮುನ್ನುಡಿ ಹಾಡದಿದ್ದರೂ, ಘೋರ ಯುದ್ಧಕ್ಕೆ ಅಂತ್ಯ ಹಾಡುತ್ತದೆ" ಎಂದು ಪ್ರಧಾನಿ ನೆತನ್ಯಾಹು ಹಮಾಸ್ಗೆ ವಾರ್ನಿಂಗ್ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಯಾವುದೇ ಎಚ್ಚರಿಕೆ ಇಲ್ಲದೇ ಹಮಾಸ್ ಉಗ್ರರು ಇಸ್ರೇಲ್ ಮೇಲೇ ಭೀಕರ ದಾಳಿ ನಡೆಸಿತು. ಈ ದಾಳಿಯಲ್ಲಿ 2,300 ಇಸ್ರೇಲಿಗಳು ಗಾಯಗೊಂಡಿದ್ದು, 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದಾಳಿಯಿಂದ ಆಕ್ರೋಶಗೊಂಡಿರುವ ಪ್ರಧಾನಿ ನೆತನ್ಯಾಹು ಅವರು, ಹಮಾಸ್ ಈ ದಾಳಿಗೆ ಬೆಲೆ ತೆರುತ್ತಾರೆ. ಮತ್ತು ದೀರ್ಘಕಾಲ ಇದನ್ನು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ ಎಂದಿದ್ದಾರೆ. " ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಐತಿಹಾಸಿಕ ಮಟ್ಟದಲ್ಲಿ ದೊಡ್ಡ ತಪ್ಪು ಮಾಡಿದ್ದೇವೆಂದು ಹಮಾಸ್ಗೆ ಅರ್ಥವಾಗಲಿದೆ. ಹಮಾಸ್ ಅಲ್ಲದೇ ಮುಂಬುರುವ ದಿನಗಳಲ್ಲಿ ಇಸ್ರೇಲ್ನ ಇತರ ಶತ್ರುಗಳಿಗೂ ನಾವೂ ನೆನೆಪಿನಲ್ಲಿ ಇಟ್ಟುಕೊಳ್ಳುವಂತೆ ಈ ದಾಳಿಗೆ ಪ್ರತ್ಯುತ್ತರವಾಗಿ ಎದಿರೇಟು ನೀಡುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಎಚ್ಚರಿಕೆ ಕೊಟ್ಟಿದ್ದಾರೆ.