ಬೀಜಿಂಗ್ (ಚೀನಾ): ಡಿಸೆಂಬರ್ 4 ರ ನಂತರ ಚೀನಾ ಕೋವಿಡ್ ಸಂಬಂಧಿತ ಸಾವು ನೋವುಗಳನ್ನು ವರದಿ ಮಾಡುತ್ತಿಲ್ಲ ಮತ್ತು ಪ್ರಮುಖ ನಗರಗಳಲ್ಲಿನ ಸ್ಮಶಾನಗಳಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಗಳ ಬಗ್ಗೆ ವಾಸ್ತವ ಅಂಕಿ-ಅಂಶಗಳನ್ನು ಪ್ರಪಂಚದಿಂದ ಮರೆಮಾಡಲು ಪ್ರಯತ್ನಿಸುತ್ತಿದೆ ಎಂದು ಸಿಂಗಾಪುರ ಮೂಲದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.
ಶೂನ್ಯ ಕೋವಿಡ್ ನೀತಿಯ ವಿರುದ್ಧ ಚೀನಾದಲ್ಲಿ ಪ್ರತಿಭಟನೆಗಳು ನಡೆದ ನಂತರ ರೋಗ ನಿಯಂತ್ರಣಕ್ಕೆ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ ಈ ಕ್ರಮದಿಂದ ಬೀಜಿಂಗ್ ಕಳೆದ 3 ವರ್ಷಗಳಲ್ಲಿಯೇ ಅತ್ಯಂತ ಭೀಕರ ಕೋವಿಡ್ ಅಲೆ ಎದುರಿಸುವ ಸನಿಹಕ್ಕೆ ಬಂದು ನಿಂತಿದೆ.
ಬೀಜಿಂಗ್‌ನಲ್ಲಿ ಕಳೆದ ನವೆಂಬರ್ 23 ರಂದು ಕೊನೆಯ ಕೋವಿಡ್ ಸಾವು ಸಂಭವಿಸಿದೆ ಎಂದು ಚೀನಾ ವರದಿ ಮಾಡಿದೆ. ಮೃತಳು 87 ವರ್ಷದ ಮಹಿಳೆಯಾಗಿದ್ದು, ಆಕೆ ಗಂಭೀರ ಹೃದಯ ಕಾಯಿಲೆ ಹೊಂದಿದ್ದಳು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಇದಕ್ಕೂ ಮುನ್ನ ಶೂನ್ಯ ಕೋವಿಡ್ ನೀತಿಯನ್ನು ಹಿಂತೆಗೆದುಕೊಳ್ಳುವ ಮೊದಲು ಸಾವಿರಾರು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು.
ಇದಾದ ನಂತರ ಕೋವಿಡ್ ಲೆಕ್ಕಾಚಾರದ ಪ್ರಮುಖ ಭಾಗವಾಗಿರುವ ಲಕ್ಷಣರಹಿತ ರೋಗಿಗಳ ಅಂಕಿ-ಅಂಶಗಳ ಬಗ್ಗೆ ವರದಿ ಮಾಡುವುದನ್ನು ಚೀನಾ ನಿಲ್ಲಿಸಿತು. ವ್ಯಾಪಕವಾಗಿ ಬಳಕೆಯಲ್ಲಿದ್ದ ಪಾಲಿಮರೇಸ್ ಚೈನ್ ರಿಯಾಕ್ಷನ್ (PCR) ಪರೀಕ್ಷಾ ಉಪಕರಣದಿಂದ ಕೋವಿಡ್ ಟೆಸ್ಟಿಂಗ್ ನಿಲ್ಲಿಸಿದ ಚೀನಾ, ಅಷ್ಟು ನಿಖರವಲ್ಲದ ರ್ಯಾಪಿಡ್ ಆ್ಯಂಟಿಜೆನ್ ಕಿಟ್ಗಳನ್ನು ಬಳಸಲಾರಂಭಿಸಿದೆ. ಡೇಟಾವನ್ನು ಬದಲಾಯಿಸಲಾಗಿದೆ ಅಥವಾ ಡೇಟಾ ಅರ್ಥಹೀನವಾಗಿರುವುದನ್ನು ಈ ಕ್ರಮ ಸೂಚಿಸುತ್ತದೆ ಎಂದು ಮಾಧ್ಯಮ ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಚೀನಾ ಅಧಿಕೃತವಾಗಿ ಕೇವಲ 5235 ಕೋವಿಡ್ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ. ಇದೇ ಡೇಟಾ ಮುಂದಿಟ್ಟುಕೊಂಡು ಒಂದು ಮಿಲಿಯನ್ಗೂ ಹೆಚ್ಚು ಕೋವಿಡ್ ಸಾವುಗಳನ್ನು ಕಂಡ ಅಮೆರಿಕವನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟೀಕಿಸಲಾರಂಭಿಸಿದ್ದರು.
ಚೀನಾದಲ್ಲಿ ಕೋವಿಡ್ -19 ನಿಂದ ಸುಮಾರು 1 ಮಿಲಿಯನ್ ಸಾವು ಸಂಭವಿಸಬಹುದು ಎಂದು ಕಳೆದ ಗುರುವಾರ ಹಾಂಗ್ ಕಾಂಗ್‌ನ ಸಂಶೋಧಕರ ವರದಿಯೊಂದು ತಿಳಿಸಿದೆ. ಅಮೆರಿಕ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಪ್ರಕಾರ ಈ ಸಂಖ್ಯೆ 2023 ರ ವೇಳೆಗೆ 1 ಮಿಲಿಯನ್ ಜನರನ್ನು ಮೀರಬಹುದು ಎಂದು ತೋರಿಸಿದೆ. ಶೂನ್ಯ ಕೋವಿಡ್ ಮೇಲಿನ ನಿರ್ಬಂಧವನ್ನು ಹಠಾತ್ತಾಗಿ ಹಿಂತೆಗೆದುಕೊಂಡಾಗ ಕೋವಿಡ್ ಉಲ್ಬಣಿಸಲು ಕಾರಣವಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ಕೋವಿಡ್ ನಿರ್ಬಂಧ ಸಡಿಲಿಕೆ; ಹೆಚ್ಚುತ್ತಿದೆ ಸಾವಿನ ಸಂಖ್ಯೆ