ಟೊರೊಂಟೊ : ಖ್ಯಾತ ಲೇಖಕಿ, ಸಮಾಜ ಸೇವಕಿ, ಇನ್ಫೊಸಿಸ್ ಫೌಂಡೇಶನ್ ಮುಖ್ಯಸ್ಥೆ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರಿಗೆ ಕೆನಡಾ ಇಂಡಿಯಾ ಫೌಂಡೇಶನ್ 'ಗ್ಲೋಬಲ್ ಇಂಡಿಯನ್ ಪ್ರಶಸ್ತಿ' ನೀಡಿ ಗೌರವಿಸಿದೆ. 50,000 ಡಾಲರ್ ಮೌಲ್ಯದ ಗ್ಲೋಬಲ್ ಇಂಡಿಯನ್ ಪ್ರಶಸ್ತಿಯನ್ನು ಪ್ರತಿ ವರ್ಷ ತಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಪ್ರಮುಖ ಛಾಪು ಮೂಡಿಸಿದ ಭಾರತೀಯರಿಗೆ ನೀಡಲಾಗುತ್ತದೆ.
"ಸುಧಾ ಮೂರ್ತಿ ಅವರಿಗೆ ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಪ್ರದಾನ ಮಾಡಲು ನಮಗೆ ಸಂತೋಷವಾಗಿದೆ. ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ ಭವಿಷ್ಯದ ಪೀಳಿಗೆಯು ಯಶಸ್ಸನ್ನು ಕಂಡುಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಮತ್ತು ತಾವು ಪಡೆದಿರುವುದನ್ನು ಸಮಾಜಕ್ಕೆ ಮರಳಿ ನೀಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಕೆನಡಾ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಸತೀಶ್ ಠಕ್ಕರ್ ಶನಿವಾರ ರಾತ್ರಿ ಹೇಳಿದರು.
ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸುಧಾ ಮೂರ್ತಿ, "ನಿಮ್ಮ ದೇಶದಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಗೌರವದ ವಿಷಯವಾಗಿದೆ" ಎಂದು ಹೇಳಿದರು. ಈ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಕೆನಡಾ ಇಂಡಿಯಾ ಫೌಂಡೇಶನ್ (ಸಿಐಎಫ್) ಗೆ ಧನ್ಯವಾದ ಅರ್ಪಿಸಿದ ಮೂರ್ತಿ, "ಸಿಐಎಫ್ ಇದು ಮಹಾಭಾರತದಲ್ಲಿ ಕೃಷ್ಣನಿದ್ದಂತೆ. ಕೃಷ್ಣನು ದೇವಕಿ ಮತ್ತು ಯಶೋದಾ ದಂಪತಿಗಳ ಮಗ. ದೇವಕಿ ಅವನ ಜೈವಿಕ ತಾಯಿ, ಆದರೆ ಯಶೋದಾ ಅವನನ್ನು ಬೆಳೆಸಿದರು. ನೀವು ಭಾರತದಲ್ಲಿ ಜನಿಸಿದ್ದೀರಿ, ಆದರೆ ಇಲ್ಲಿ ನೆಲೆಸಿದ್ದೀರಿ. ಅದರಂತೆ ಈ ದೇಶ ನಿಮಗೆ ಯಶೋದೆ ಇದ್ದಂತೆ ಮತ್ತು ನಿಮ್ಮ ತಾಯಿ ಭಾರತ. ನೀವು ಇಬ್ಬರೂ ತಾಯಂದಿರಿಗೆ ಸೇರಿದವರು." ಎಂದು ಬಣ್ಣಿಸಿದರು