ಟೆಲ್ ಅವೀವ್(ಇಸ್ರೇಲ್): ಗಾಜಾದಲ್ಲಿ ಹಮಾಸ್ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಬಗ್ಗೆ ರೆಡ್ ಕ್ರಾಸ್ ಸಂಘಟನೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಇಸ್ರೇಲಿ ವಕೀಲರ ಗುಂಪು ಶುರಾತ್ ಹಾದಿನ್ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ (ಐಸಿಆರ್ಸಿ) ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಇಸ್ರೇಲಿ ಸಂತ್ರಸ್ತರ ಪರವಾಗಿ ವಿಶ್ವಾದ್ಯಂತ ಕಾನೂನು ಹೋರಾಟ ನಡೆಸುತ್ತಿರುವ ವಕೀಲರ ಗುಂಪು 24 ಒತ್ತೆಯಾಳುಗಳ ಕುಟುಂಬಗಳ ಪರವಾಗಿ ಜೆರುಸಲೇಂನಲ್ಲಿ ದೂರು ದಾಖಲಿಸಿದೆ.
ಗಾಜಾದಲ್ಲಿ ಸೆರೆಯಾಳುಗಳಾಗಿ ಬಂಧನಕ್ಕೊಳಗಾದ ಇಸ್ರೇಲಿಗಳನ್ನು ಭೇಟಿ ಮಾಡುವ ತನ್ನ ಉದ್ದೇಶ ಮತ್ತು ನೈತಿಕ ಕರ್ತವ್ಯವನ್ನು ಪೂರೈಸಲು ಐಸಿಆರ್ಸಿ ವಿಫಲವಾಗಿದೆ ಎಂದು ಗುಂಪು ಟೀಕಿಸಿದೆ. "ಒತ್ತೆಯಾಳುಗಳು ಯಹೂದಿಗಳು ಎಂಬ ಒಂದೇ ಕಾರಣಕ್ಕಾಗಿ ಮಾನವ ಜೀವಗಳ ಬಗ್ಗೆ ಇಂಥ ನಿರ್ಲಕ್ಷ್ಯ ಮತ್ತು ಅಗೌರವವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಶುರಾತ್ ಹಾದಿನ್ ಸಂಸ್ಥಾಪಕ ಮತ್ತು ಅಧ್ಯಕ್ಷ ನಿಟ್ಸಾನಾ ದರ್ಶನ್-ಲೀಟ್ನರ್ ಹೇಳಿದರು. ಐಸಿಆರ್ಸಿ ಪಕ್ಷಪಾತಿಯಾಗಿದ್ದು, ಇಸ್ರೇಲಿ ಪ್ರಜೆಗಳ ಬಗ್ಗೆ ನಿರಾಸಕ್ತಿ ಹೊಂದಿದೆ ಎಂದು ಅವರು ಹೇಳಿದರು.
"ಐಸಿಆರ್ಸಿ ನಿಧಾನವಾಗಿ ಕೆಲಸ ಮಾಡುತ್ತಿದೆ ಮತ್ತು ಒತ್ತೆಯಾಳುಗಳ ಭೇಟಿಗಳಿಗೆ ಅನುಕೂಲವಾಗುವಂತೆ ಅಥವಾ ಅಗತ್ಯ ಔಷಧಗಳನ್ನು ಪೂರೈಸಲು ದೃಢವಾಗಿ ಕಾರ್ಯನಿರ್ವಹಿಸಲಿಲ್ಲ" ಎಂದು ಅವರು ಹೇಳಿದರು.