ಟೊರೊಂಟೊ( ಕೆನಡಾ):ಉನ್ನತ ಶಿಕ್ಷಣ ಅಭ್ಯಾಸಕ್ಕೆ ಎಂದು ಕೆನಡಾಕ್ಕೆ ತೆರಳಿ ವಂಚನೆಗೊಳಗಾಗಿ ಗಡೀಪಾರು ಭೀತಿಯಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಕಲಿ ಏಜೆಂಟರಿಂದ ವಂಚನೆಗೊಳಗಾದ ನಿಜವಾದ ವಿದ್ಯಾರ್ಥಿಗಳನ್ನು ಗಡೀಪಾರು ಮಾಡಲಾಗುವುದಿಲ್ಲ. ಅಧ್ಯಯನಕ್ಕೆ ಅಡ್ಡಿ ಉಂಟಾಗದಿರಲಿ ಎಂಬ ಕಾರಣಕ್ಕಾಗಿ ಕೆನಡಾದಲ್ಲಿ ತಾತ್ಕಾಲಿಕ ಉಳಿವಿಗೆ ಪರವಾನಗಿಗಳನ್ನು ನೀಡಲಾಗುವುದು ಎಂದು ಕೆನಡಾದ ವಲಸೆ ಸಚಿವ ಸೀನ್ ಫ್ರೇಸರ್ ಹೇಳಿದರು.
ವಂಚನೆಯಲ್ಲಿ ಭಾಗಿಯಾಗಿಲ್ಲದ ಭಾರತ ಸೇರಿದಂತೆ ಯಾವುದೇ ದೇಶದ ವಿದ್ಯಾರ್ಥಿಗಳು ಗಡೀಪಾರು ಆಗುವುದನ್ನು ಕೆನಡಾ ಸರ್ಕಾರ ತಡೆ ಹಿಡಿದಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ನಿಜವಾದ ಉದ್ದೇಶದಿಂದ ಇಲ್ಲಿಗೆ ಬಂದಿದ್ದಾರೆ. ನಕಲಿ ಏಜೆಂಟ್ಗಳ ದಾಳಕೆ ಸಿಲುಕಿ ಮೋಸದ ದಾಖಲಾತಿಗಳ ಬಳಕೆಯ ಜ್ಞಾನವಿಲ್ಲದೆ ಈ ಹಗರಣದಲ್ಲಿ ಸಿಲುಕಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅಂತಹ ವಿದ್ಯಾರ್ಥಿಗಳಿಗೆ ದೇಶದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಪರವಾನಗಿ ಪತ್ರವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದು ವಿದ್ಯಾರ್ಥಿಗಳು ಇಲ್ಲಿಯೇ ಉಳಿದು ಶಿಕ್ಷಣವನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ. ಅವರು ಕೆನಡಾವನ್ನು ಮರು ಪ್ರವೇಶಿಸುವ 5 ವರ್ಷಗಳ ನಿಷೇಧಕ್ಕೆ ಒಳಪಡುವುದಿಲ್ಲ ಎಂದು ಕೆನಡಾದ ವಲಸೆ ಸಚಿವರು ಭರವಸೆ ನೀಡಿದರು.
ಅಕ್ರಮದಲ್ಲಿ ಭಾಗಿಯಾಗಿದ್ದರೆ ಶಿಕ್ಷೆ:ಇದೇ ವೇಳೆ ಅಕ್ರಮವಾಗಿ ದೇಶ ಪ್ರವೇಶಿಸಿದ್ದರೆ, ಅಂಥವರು ಶಿಕ್ಷೆಗೆ ಒಳಗಾಗಲಿದ್ದಾರೆ. ಮೋಸದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧದ ಕ್ರಮಗಳಿಗೆ ಅವರೇ ಜವಾಗ್ದಾರರಾಗಿರುತ್ತಾರೆ. ಕೆನಡಾದ ಕಾನೂನಿನ ಸಂಪೂರ್ಣ ಪರಿಣಾಮಗಳನ್ನು ಅವರು ಎದುರಿಸುತ್ತಾರೆ ಎಂದು ಅವರು ಎಚ್ಚರಿಸಿದರು.
ಶಿಕ್ಷಣಕ್ಕೆಂದು ಬಂದ ನಿಜವಾದ ವಿದ್ಯಾರ್ಥಿಗಳ ಮುಂದಿನ ಜೀವನಕ್ಕಾಗಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಅಕ್ರಮವಾಗಿ ದೇಶ ಪ್ರವೇಶ ಮಾಡಿದ ಉಳಿದವರು ಕಾನೂನು ಕ್ರಮ ಎದುರಿಸುವುದು ಶತಃಸಿದ್ಧ ಎಂದು ವಲಸೆ ಸಚಿವ ಸೀನ್ ಫ್ರೇಸರ್ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸೀನ್ ಫ್ರೇಸರ್, ಏಜೆಂಟರ ವಂಚನೆಗೊಳಗಾಗಿ ಪ್ರವೇಶ ಪತ್ರಗಳನ್ನು ಪಡೆದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಸರ್ಕಾರ ಪರಿಹಾರ ನೀಡಲಿದೆ. ಅಂಥವರ ಯೋಗಕ್ಷೇಮವು ನಮ್ಮ ಆದ್ಯತೆಯಾಗಿ ಉಳಿದಿದೆ. ಈ ಸಮಸ್ಯೆ ಪರಿಹರಿಸಲು ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
ವಂಚನೆಗೊಳಗಾದ ಸಂತ್ರಸ್ತರನ್ನು ರಕ್ಷಿಸಲು ಮತ್ತು ಸಹಾಯ ಮಾಡಲು ಕಾರ್ಯಪಡೆ ರಚಿಸಲಾಗಿದೆ. ದಾಖಲೆ ಪರಿಶೀಲನೆ ವೇಳೆ ಗಡೀಪಾರು ಮಾಡುವುದುನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಗಡೀಪಾರು ಮಾಡುವುದನ್ನು ನಿಲ್ಲಿಸಲಾಗಿದೆ. ಅವರು ಕೆನಡಾದಲ್ಲಿ ಉಳಿಯಲು ಅರ್ಹರಾಗುತ್ತಾರೆ. ಉಳಿದವರು ದೇಶದಿಂದ ಹೊರಬೀಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ?:ಕೆನಡಾದ ಒಂಟಾರಿಯೋದ ಟೊರೊಂಟೊದಲ್ಲಿರುವ ಹಂಬರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ಸಂಬಂಧ ಅವರಿಗೆ ಪತ್ರ ನೀಡಲಾಗಿತ್ತು. ವಿದ್ಯಾರ್ಥಿಗಳು ನಕಲಿ ದಾಖಲೆ ಮತ್ತು ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜಲಂಧರ್‌ನ ಟ್ರಾವೆಲ್ ಏಜೆಂಟ್ 16 ರಿಂದ 20 ಲಕ್ಷ ರೂ. ಪಡೆದು, ನಕಲಿ ದಾಖಲೆ ಪ್ರಮಾಣಪತ್ರ ಸೃಷ್ಟಿಸಿ ಈ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿದ್ದ. ಇದನ್ನು ಅರಿತ ಅಲ್ಲಿನ ಕಾಲೇಜು ಮತ್ತು ಸರ್ಕಾರ ಆ ವಿದ್ಯಾರ್ಥಿಗಳು ಕೆನಡಾದಿಂದ ಭಾರತಕ್ಕೆ ಮರಳುವಂತೆ ಸೂಚಿಸಿತ್ತು.
ಇದನ್ನೂ ಓದಿ:700 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಆದೇಶ ರದ್ದು ಮಾಡುವಂತೆ ಕೆನಡಾ ಸಂಸದೀಯ ಸಮಿತಿ ಒತ್ತಾಯ