ಹೂಸ್ಟನ್ (ಅಮೆರಿಕ):ಅಮೆರಿಕದ ಟೆಕ್ಸಾಸ್ನಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ಅಮೆರಿಕನ್ ಯುವತಿ ಕೊನೆಗೂ ಶವವಾಗಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಒಕ್ಲಹೋಮ ರಾಜ್ಯದ ಸುಮಾರು 322 ಕಿಲೋ ಮೀಟರ್ ದೂರದಲ್ಲಿ ಶವ ದೊರೆತಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಖೆ ನಡೆಸುತ್ತಿದ್ದಾರೆ.
ಮೆಕಿನ್ನಿ ಉಪನಗರದಲ್ಲಿ ಉದ್ಯೋಗಿಯಾಗಿರುವ 25 ವರ್ಷದ ಲಹರಿ ಪಥಿವಾಡಾ ಮೃತಪಟ್ಟ ಭಾರತೀಯ ಮೂಲದ ಯುವತಿ. ಈ ತಿಂಗಳ ಆರಂಭದಲ್ಲಿ ಟೆಕ್ಸಾಸ್ ರಾಜ್ಯದಿಂದ ಇವರು ನಾಪತ್ತೆಯಾಗಿದ್ದರು. ಕೆಲಸಕ್ಕೆ ಹೋಗುವ ವೇಳೆ ಕಾಣೆಯಾಗಿದ್ದರು. ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಪತ್ತೆಯಾಗಿರಲಿಲ್ಲ. ಕೊನೆಗೆ, ಒಕ್ಲಹೋಮ್ ರಾಜ್ಯದ ಹೊರಭಾಗದಲ್ಲಿ ಶವವಾಗಿ ಗೋಚರವಾಗಿದ್ದಾರೆ.
ಮೆಕಿನ್ನಿ ಉಪನಗರದಲ್ಲಿ ಉದ್ಯೋಗಿಯಾಗಿದ್ದ ಲಹರಿ ಪಥಿವಾಡಾ ಅವರು ಟೊಯೊಟಾ ಮೂಲಕ ಕೆಲಸಕ್ಕೆ ಹೋಗಿದ್ದು, ಅಂದಿನಿಂದ ಕಂಡುಬಂದಿರಲಿಲ್ಲ. ಕುಟುಂಬಸ್ಥರು ಸಾಕಷ್ಟು ಹುಡುಕಾಡಿದ್ದರು. ಆದರೆ, ಈವರೆಗೂ ಸಿಕ್ಕಿರಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕವೂ ಪತ್ತೆ ಮಾಡುವ ಕೆಲಸವಾಗಿತ್ತು. ಮೇ 13 ರಂದು ಆಕೆಯ ದೇಹವನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?: ಲಹರಿ ಪಥಿವಾಡ ಅವರು ಕೆಲಸಕ್ಕೆಂದು ಟೊಯೊಟಾ ಕಾರಿನಲ್ಲಿ ತೆರಳಿದ್ದರು. ಕಾರು ಕೊನೆಯ ಬಾರಿಗೆ ಎಲ್ ಡೊರಾಡೊ ಪಾರ್ಕ್ವೇ ಮತ್ತು ಡಲ್ಲಾಸ್ ಉಪನಗರದ ಹಾರ್ಡಿನ್ ಬೌಲೆವಾರ್ಡ್ ಪ್ರದೇಶದಲ್ಲಿ ಓಡಾಡುತ್ತಿದ್ದುದನ್ನು ತಾವು ಗಮನಿಸಿರುವುದಾಗಿ ಟೆಕ್ಸಾಸ್ನ ಕಾಲಿನ್ಸ್ ಕೌಂಟಿಯ ಮೆಕಿನ್ನಿ ನಿವಾಸಿಯೊಬ್ಬರು ತಿಳಿಸಿದ್ದರು. ಇದರಂತೆ ಫೋನ್ ಟ್ರ್ಯಾಕ್ ಮಾಡಲಾಗಿತ್ತು. ಮೃತದೇಹವನ್ನು ಒಕ್ಲಹೋಮ್ ನಗರದ ಹೊರಗಡೆ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.