ನವದೆಹಲಿ: 2023ರಲ್ಲಿ ವಿದೇಶಗಳಿಂದ ಭಾರತಕ್ಕೆ ಒಳಬರುವ ಹಣದ ಪ್ರಮಾಣ ಶೇ 12.3ರಷ್ಟು ಏರಿಕೆಯಾಗಿ 125 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2022ರಲ್ಲಿ ಈ ಪ್ರಮಾಣ 111.22 ಬಿಲಿಯನ್ ಡಾಲರ್ ಆಗಿತ್ತು. ಭಾರತದ ಒಳಬರುವ ಹಣದ ಪ್ರಮಾಣ ಈಗ ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 3.4 ರಷ್ಟಿದೆ.
ಸೋಮವಾರ ಬಿಡುಗಡೆಯಾದ ವಿಶ್ವಬ್ಯಾಂಕ್ನ "ವಲಸೆ ಮತ್ತು ಅಭಿವೃದ್ಧಿ ಸಾರಾಂಶ" (Migration and Development Brief) ವರದಿಯ ಪ್ರಕಾರ, ಭಾರತವು ಜಾಗತಿಕವಾಗಿ ವಿದೇಶಗಳಿಂದ ಅತಿ ಹೆಚ್ಚು ಹಣ ಸ್ವೀಕರಿಸುವ ದೇಶವಾಗಿ ಮುಂದುವರೆದಿದೆ. ಮೆಕ್ಸಿಕೊ (67 ಬಿಲಿಯನ್ ಡಾಲರ್) ಮತ್ತು ಚೀನಾ (50 ಬಿಲಿಯನ್ ಡಾಲರ್) ನಂತರದ ಸ್ಥಾನಗಳಲ್ಲಿವೆ. ದಕ್ಷಿಣ ಏಷ್ಯಾಕ್ಕೆ ಬರುವ ಒಟ್ಟು ವಿದೇಶಿ ಹಣದಲ್ಲಿ ಶೇಕಡಾ 66 ರಷ್ಟು ಭಾರತಕ್ಕೆ ಬರುತ್ತಿದೆ. 2022 ರಲ್ಲಿ ಈ ಪ್ರಮಾಣ ಶೇಕಡಾ 63ರಷ್ಟಿತ್ತು.
ಪ್ರತಿಭಾವಂತ ಭಾರತೀಯರು ಕೆಲಸ ಮಾಡುತ್ತಿರುವ ಪ್ರಮುಖ ದೇಶಗಳಾದ ಯುಎಸ್, ಯುಕೆ ಮತ್ತು ಸಿಂಗಾಪುರಗಳಲ್ಲಿನ ಹಣದುಬ್ಬರ ಇಳಿಕೆ ಮತ್ತು ಆದಾಯದಲ್ಲಾದ ಹೆಚ್ಚಳದಿಂದ ಅವರು ಭಾರತಕ್ಕೆ ಕಳುಹಿಸುತ್ತಿರುವ ಹಣದ ಪ್ರಮಾಣ ಹೆಚ್ಚಾಗಿದೆ. ಈ ಮೂರು ದೇಶಗಳು ಭಾರತಕ್ಕೆ ಒಟ್ಟು ಹಣ ರವಾನೆಯ ಹರಿವಿನ ಶೇಕಡಾ 36 ರಷ್ಟನ್ನು ಹೊಂದಿವೆ. ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಯಿಂದ ಹೆಚ್ಚಿನ ಒಳಹರಿವು ಕೂಡ ಭಾರತಕ್ಕೆ ಹಣ ರವಾನೆ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇದಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಭಾರತಕ್ಕೆ ಬರುವ ಒಟ್ಟು ವಿದೇಶಿ ಹಣದ ಪೈಕಿ ಶೇಕಡಾ 18ರಷ್ಟು ಯುಎಇ ಯಿಂದಲೇ ಬರುತ್ತಿದೆ. ಯುಎಸ್ ನಂತರದ ಸ್ಥಾನದಲ್ಲಿದೆ.