ಲಾಹೋರ್(ಪಾಕಿಸ್ತಾನ):ಭ್ರಷ್ಟಾಚಾರ, ಅಸಮರ್ಥ ಆಡಳಿತದಿಂದಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಇಮ್ರಾನ್ ಖಾನ್ ಮತ್ತು ಅವರ ಆಪ್ತ ಸಹಾಯಕ ಗಾಯಗೊಂಡಿದ್ದಾರೆ. ಬಳಿಕ ಖಾನ್ರನ್ನು ಅಜ್ಞಾತಸ್ಥಳಕ್ಕೆ ಕರೆದೊಯ್ಯಲಾಗಿದೆ.
ಈಗಿನ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿ, ಭಾರತವನ್ನು ಹೊಗಳುತ್ತಿದ್ದ ಇಮ್ರಾನ್ ಖಾನ್ ಚುನಾವಣೆಯ ಸಿದ್ಧತೆಯ ಭಾಗವಾಗಿ ಲಾಹೋರ್ನಿಂದ 100 ಕಿಮೀ ದೂರದಲ್ಲಿರುವ ವಜೀರಾಬಾದ್ನಲ್ಲಿ ಇಂದು ತೆರೆದ ವಾಹನದಲ್ಲಿ ರ‍್ಯಾಲಿ ನಡೆಸುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.
ದಾಳಿಕೋರನ ಬಂಧನ:ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಬಲಗಾಲಿಗೆ ಪೆಟ್ಟಾಗಿದೆ. ದಾಳಿ ಬಳಿಕ ಖಾನ್ರನ್ನು ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್ ಸಮೇತ ಇನ್ನೊಂದು ವಾಹನದಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಅಲ್ಲಿನ ಮಾಧ್ಯಮಗಳು ಭಿತ್ತರಿಸಿವೆ.